ಶಾರ್ಜಾದಲ್ಲಿ‌‌ ಹತನಾದ ಆಲ್ವಿನ್ ಅಂತ್ಯಕ್ರಿಯೆ

ಲೋಕಬಂಧು ನ್ಯೂಸ್ | ಕುಂದಾಪುರ
ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಭೀಕರ ಹತ್ಯೆಯಾದ ಇಲ್ಲಿನ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದ‌ರ್ (50) ಅವರ ಪಾರ್ಥಿವ ಶರೀರ ಶುಕ್ರವಾರ ಹುಟ್ಟೂರಿಗೆ ಆಗಮಿಸಿದ್ದು, ಬಳಿಕ ಕುಂದಾಪುರ ಶಾಸ್ತ್ರೀ ವೃತ್ತದ ಬಳಿಯ ಸಿಎಸ್‌ಐ ಕೃಪಾ ಚರ್ಚ್‌ನ ಸಮಾಧಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಶಾರ್ಜಾದಿಂದ ಪಾರ್ಥಿವ ಶರೀರ ಸೆ.24ರಂದು ರಾತ್ರಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದು, 8.45ರ ಸುಮಾರಿಗೆ ಮಂಗಳೂರಿನಿಂದ ಅಂಬುಲೆನ್ಸ್ ಮೂಲಕ ಮೃತದೇಹವನ್ನು ಪ್ರಕಾಶ್ ಕುಂದ‌ರ್ ಅವರ ಹೊನ್ನನಕೇರಿಯ ನಿವಾಸಕ್ಕೆ ತರಲಾಯಿತು.


ಮೃತದೇಹ ನಿವಾಸಕ್ಕೆ ಬರುತ್ತಲೇ ಮೃತರ ಹಿರಿಯ ಸಹೋದರಿ ಅನಿತಾ, ಕುಟುಂಬಿಕರು, ಸಂಬಂಧಿಗಳು ಸಹಿತ ಹಿತೈಷಿಗಳು ಕಣ್ಣೀರಿಟ್ಟರು. ಮಳೆಯ ನಡುವೆಯೂ ಆಗಮಿಸಿದ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ನಿವಾಸದಲ್ಲಿ ಅಂತಿಮ ಪೂಜಾ ವಿಧಿ ನಡೆಸಿ ಬಳಿಕ ಚರ್ಚ್‌ಗೆ ಕೊಂಡೊಯ್ಯಲಾಯಿತು.


ಬಳಿಕ ಸಿಎಸ್ಐ ಕೃಪಾ ಚರ್ಚ್‌ನ ಸಮಾಧಿ ಸ್ಥಳದಲ್ಲಿ ಆಲ್ವಿನ್ ಅವರ ತಂದೆ, ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು.


ಸಿಎಸ್‌ಐ ಕೃಪಾ ಚರ್ಚ್‌ ಧರ್ಮಗುರು ರೆ.ಫಾ.ಇಮಾನ್ಯುಯೆಲ್‌ ಜಯಕ‌ರ್ ನೇತೃತ್ವದಲ್ಲಿ ಏರಿಯಾ ಅಧ್ಯಕ್ಷ ರೆ.ಕಿಶೋ‌ರ್ ಕುಮಾರ್, ರೆ.ಎಡ್ಡಿನ್ ಜೋಸೆಫ್, ಸಿಎಎಸ್‌ಐ ಡಯಾಸಿಸ್ ಕೋಶಾಧಿಕಾರಿ ಐವಾನ್ ಸೋನ್ಸ್ ,ರೆ ಪ್ರವೀಣ್ ಮಾಬೆನ್, ಬಸ್ರೂರು ಎಲಿಜಬೆತ್ ಚರ್ಚ್‌ನ ರೆ.ಫಾ.ರವಿ ಶಶಿಕಲಾ, ರೆ.ಸ್ಟೀವನ್ ಸರ್ವೋತ್ತಮ್ ಮೊದಲಾದವರು ಮನೆ ಹಾಗೂ ಚರ್ಚ್‌ನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ್ ಕುಮಾ‌ರ್ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂ‌ರ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಮಾಜಿ ಸದಸ್ಯರಾದ ವಿ.ಪ್ರಭಾಕರ್, ಎಚ್‌.ನರಸಿಂಹ, ರಾಜೇಶ ಕಾವೇರಿ, ರತ್ನಾಕರ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ ಹೆಗ್ಡೆ, ವಿಜಯ್ ಎಸ್.ಪೂಜಾರಿ ಮೊದಲಾದವರು ಭೇಟಿ ನೀಡಿದರು.