ವಿಟ್ಲಪಿಂಡಿಯಲ್ಲಿ ಶ್ರೀಕೃಷ್ಣನ ಸುವರ್ಣ ರಥಯಾನ

ಲೋಕಬಂಧು ನ್ಯೂಸ್ | ಉಡುಪಿ, ಸೆ.5
ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಶ್ರೀಕೃಷ್ಣ ಲೀಲೋತ್ಸವ ವಿಟ್ಲಪಿಂಡಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಗೊಲ್ಲವೇಷಧಾರಿಗಳು ಮೊಸರು ಕುಡಿಕೆಗಳನ್ನು ಒಡೆದು ಸಂಭ್ರಮಿಸಿದರು. ಹುಲಿವೇಷ ಸಹಿತ ವಿವಿಧ ಜಾನಪದ ವೇಷಗಳು ಮೆರವಣಿಗೆಯಲ್ಲಿ ಸಾಗಿಬಂದಿದ್ದು, ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತಾದಿಗಳು ಮಹೋತ್ಸವಕ್ಕೆ ಸಾಕ್ಷಿಗಳಾದರು.
ಪರ್ಯಾಯ ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರು ಬೆಳಿಗ್ಗೆ ಶ್ರೀಕೃಷ್ಣನನ್ನು ವಜ್ರಬಾಲಕೃಷ್ಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಪಲ್ಲಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಆಗಮಿಸಿದ ಭಕ್ತಾದಿಗಳಿಗೆ ಉಂಡೆ- ಚಕ್ಕುಲಿ ಪ್ರಸಾದರೂಪವಾಗಿ ನೀಡಲಾಯಿತು.


ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರಬರುವಂತಿಲ್ಲವಾದ್ದರಿಂದ ಪ್ರತಿಷ್ಠಾಪಿಸಲಾದ ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಷೋಡಷೋಪಚಾರ ಪೂಜೆ ಮಾಡಿ, ನಂತರ ಮಹಾಪೂಜೆ ನೆರವೇರಿಸಿದರು.
ಅಪರಾಹ್ನ 3 ಗಂಟೆಯ ಸುಮಾರಿಗೆ ಮೃಣ್ಮಯ ಶ್ರೀಕೃಷ್ಣ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ರಥಬೀದಿಗೆ ತರಲಾಯಿತು. ಬಳಿಕ ಆ ಮೂರ್ತಿಯನ್ನು ಸ್ವರ್ಣ ರಥದಲ್ಲಿರಿಸಲಾಯಿತು.
ಅದಕ್ಕೂ ಮುನ್ನ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಪ್ರತ್ಯೇಕ ರಥದಲ್ಲಿರಿಸಲಾಗಿತ್ತು.
ಪರ್ಯಾಯ ಶ್ರೀಪಾದರು ಆರತಿ ಬೆಳಗುವ ಮೂಲಕ ಚಿನ್ನದ ರಥೋತ್ಸವಕ್ಕೆ ಚಾಲನೆ ನೀಡಿದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.
ರಥ ಸಾಗುತ್ತಲೇ ಹುಲಿವೇಷ ಸಹಿತ ವಿವಿಧ ಜಾನಪದ ವೇಷಧಾರಿಗಳು ಉತ್ಸವದಲ್ಲಿ ಭಾಗವಹಿಸಿದರು. ಭಕ್ತರು ಉತ್ಸಾಹದಿಂದ ಕೃಷ್ಣನಾಮ ಸಂಕೀರ್ತನೆಯೊಂದಿಗೆ ತೇರು ಎಳೆದರು.
ಇದೇ ವೇಳೆ ಮೊಸರುಕುಡಿಕೆ ಒಡೆಯಲು ಸಿದ್ಧರಾಗಿದ್ದ ಗೊಲ್ಲ ವೇಷಧಾರಿಗಳು ರಥಬೀದಿಯ ಗುರ್ಜಿಗಳಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಡೆದರು.
ರಥೋತ್ಸವ ಸಂದರ್ಭದಲ್ಲಿ ಹಣ್ಣು ಹಂಪಲು ಹಾಗೂ ಉಂಡೆ- ಚಕ್ಕುಲಿಗಳನ್ನು ಭಕ್ತರತ್ತ ಪ್ರಸಾದವಾಗಿ ಎಸೆಯಲಾಯತು. ಈ ಬಾರಿ ಉಂಡೆ- ಚಕ್ಕುಲಿ ಪ್ಯಾಕೆಟ್ ಎಸೆದಿರುವುದು ವಿಶೇಷವಾಗಿದ್ದು, ಜನಮೆಚ್ಚುಗೆಗೆ ಪಾತ್ರವಾಯಿತು.
ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವದ ಬಳಿಕ ಮೃಣ್ಮಯ ಕೃಷ್ಣ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು.
ಶೀರೂರು ಮಠ ಎದುರಿನ ವಿಶೇಷ ವೇದಿಕೆಯಲ್ಲಿ ಮಲ್ಲಯುದ್ಧ ಪ್ರದರ್ಶನ ಏರ್ಪಡಿಸಲಾಗಿತ್ತು.
ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ ನಡೆಯಿತು.