ಪೇಜಾವರ ಶ್ರೀ ಚಾರಿತ್ರಿಕ ಚಾತುರ್ಮಾಸ್ಯಕ್ಕೆ ವೈಭವದ ತೆರೆ

ಲೋಕಬಂಧು ನ್ಯೂಸ್ | ನವದೆಹಲಿ
ಇಲ್ಲಿನ ವಸಂತ್ ಕುಂಜ್ ಪೇಜಾವರ ಶಾಖಾಮಠ ವೇದವ್ಯಾಸ ಗುರುಕುಲದಲ್ಲಿ ಸೆ.25ರಂದು ಶುಕ್ರವಾರ ಸಂಜೆ ನಡೆದ ಭಕ್ತಿಪೂರ್ಣ ಕಾರ್ಯಕ್ರಮದೊಂದಿಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ‌ 39ನೇ ಚಾತುರ್ಮಾಸ್ಯ ವ್ರತ ಭಗವದರ್ಪಣಗೊಂಡಿತು.
ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮುಖ್ಯ ಅಭ್ಯಾಗತರಾಗಿದ್ದರು. ಶ್ರೀಪಾದರಿಗೆ ಪುಷ್ಪಾಭಿಷೇಕದ ಮೂಲಕ ಗುರುವಂದನೆ ಸಲ್ಲಿಸಲಾಯಿತು.


ಶ್ರೀಪಾದರು ನೀಡಿದ ಸಂತ ಸಂಗಮದ ನಿರ್ಣಯವನ್ನು ಸ್ವೀಕರಿಸಿದ ಮುಖ್ಯಮಂತ್ರಿ ಗುಪ್ತಾ, ಉತ್ತಮ ಸೂಚನೆಗಳನ್ನು ನೀಡಿದ್ದೀರಿ. ನಿಶ್ಚಿತವಾಗಿ ದೆಹಲಿ ಸರ್ಕಾರ ಈ ಬಗ್ಗೆ ಕ್ರಿಯಾತ್ಮಕ ಹೆಜ್ಜೆ ಇಡಲಿದೆ ಎಂದು ಭರವಸೆ ನೀಡಿದರು.


ತನ್ನ ಅಧಿಕಾರಾವಧಿಯಲ್ಲಿ ಈ ದಿವ್ಯ ಸತ್ರ ನಡೆದಿರುವುದು ಅತೀವ ಸಂತಸ ತಂದಿದೆ. ಉತ್ತಮ ಕಾರ್ಯಗಳು ಎರಡು ತಿಂಗಳಲ್ಲಿ ನಡೆದಿದೆ. ಅದರ ಫಲ ದೆಹಲಿಯ ಸುಖ, ಸಮೃದ್ಧಿಗೆ ಕಾರಣವಾಗಲಿದೆ ಎಂಬ ವಿಶ್ವಾಸ ಇದೆ ಎಂದರು.


ಈಶಾನ್ಯ ರಾಜ್ಯಗಳಿಗೆ ಬನ್ನಿ
ದೇಶಾದ್ಯಂತ ದಶಕಗಳಿಂದ ಸಮಾಜೋನ್ನತಿಯ ಕಾರ್ಯ ಮಾಡುತ್ತಿರುವ ಪೇಜಾವರ ಮಠ ಅತ್ಯಂತ ಅವಶ್ಯವಾಗಿ ಈಶಾನ್ಯ ರಾಜ್ಯಗಳಿಗೆ ಹೆಜ್ಜೆ ಇಟ್ಟು ಮಠದ ಸೇವಾಕಾರ್ಯಗಳನ್ನು ಆರಂಭಿಸಬೇಕು. ಪೇಜಾವರ ಮಠದಿಂದ ಆ ಕಾರ್ಯ ಸಾಧ್ಯ. ಈ ಬಗ್ಗೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳಲ್ಲಿ ಮಾತನಾಡುವುದಾಗಿ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹೇಳಿದರು.


ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಅಲೋಕ್ ಕುಮಾರ್  ಎರಡು ತಿಂಗಳ ಕಾರ್ಯಕ್ರಮದ ಅವಲೋಕನ ವರದಿ ನೀಡಿದರು. ಶಾಸಕ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಕಾರ್ಪೋರೇಟರ್ ಇಂದ್ರಜಿತ್ ಸೆರಾವತ್, ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ವರಖೇಡಿ ಶ್ರೀನಿವಾಸ್, ಗುರುಕುಲದ ಪ್ರಾಚಾರ್ಯ ಡಾ‌ ವಿಠೋಬಾಚಾರ್ಯ ಉಪಸ್ಥಿತರಿದ್ದರು.


ಸವಿತಾ ಕಾರ್ಯಕ್ರಮ‌ ನಿರೂಪಿಸಿ, ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದರು. ರಾಕೇಶ್ ಗೌರ್, ಕೃಷ್ಣಮೂರ್ತಿ ಭಟ್, ಶ್ರೀನಿಧಿ ಜೋಶಿ,  ಅಶ್ವಿನ್ ಕುಮಾರ್, ನೀರಜ್ ಟ್ರೆಗಾನ್, ದೀಪಕ್. ದೇವೇಂದರ್,  ನವನೀತ್ ಕಠಾನ್ ಸಹಕರಿಸಿದರು.


ಈ ಸಂದರ್ಭದಲ್ಲಿ ಡಾ. ವಿಠೋಬಾಚಾರ್ಯ ದಂಪತಿಯನ್ನು ಗೌರವಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.