ಕೋಟಿತೀರ್ಥ ಪುಷ್ಕರಿಣಿಗೆ ಹಾರಿ ಆತ್ಮಹತ್ಯೆ

ಲೋಕಬಂಧು ನ್ಯೂಸ್ | ಕುಂದಾಪುರ, ಸೆ.23
ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಬುಧವಾರ ಬೆಳಿಗ್ಗೆ ಮೃತದೇಹ ಹುಡುಕಿ ಮೇಲಕ್ಕೆತ್ತಲಾಯಿತು.
ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಆತ್ಮಹತ್ಯೆ ಮಾಡಿಕೊಂಡವರು.


ಕುಂದಾಪುರದ ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪದ್ಮನಾಭ ಅವರು ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮನೆಯಿಂದ ಅವರು ತೆರಳಿದ್ದು ರಾತ್ರಿಯಾದರೂ ಮನೆಗೆ ವಾಪಾಸ್ಸು ಬಂದಿರಲಿಲ್ಲ. ರಾತ್ರಿ ವೇಳೆ ಅವರ ದ್ವಿಚಕ್ರ ವಾಹನ ದೇವಸ್ಥಾನದ ಸಮೀಪ ಪತ್ತೆಯಾಗಿತ್ತು. ಮನೆಯವರು ಹುಡುಕಾಟ ಮಾಡಿದ್ದರೂ ಸುಳಿವು ದೊರೆತಿರಲಿಲ್ಲ.


ಕೋಟಿತೀರ್ಥ ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲಿನ ಮೇಲೆ ಚಪ್ಪಲಿ ಹಾಗೂ ಟೋಪಿ ಇದ್ದ ಕಾರಣ ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಬುಧವಾರ ಬೆಳಿಗ್ಗೆಯಿಂದ ಶೋಧ ನಡೆಸಲಾಯಿತು.


ನಿತ್ಯವೂ ಕೆರೆಯಲ್ಲಿ ಈಜಲು ಬರುವ ಮಾರ್ಕೋಡು ಸುಧೀರ್ ಕುಮಾ‌ರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಮಂಜ ಮೊದಲಾದವರು ಬೋಟ್ ಸಹಾಯದಿಂದ ನೀರಿನಲ್ಲಿ ಶೋಧ ನಡೆಸಿದ್ದು 9 ಗಂಟೆ ವೇಳೆ ಮೃತದೇಹ ನೀರಿನಲ್ಲಿರುವುದು ತಿಳಿದುಬಂದಿದ್ದು, ಅದೇ ಸಮಯಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ತಂಡ ನೀರಿಗಿಳಿದು ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹ ಮೇಲಕ್ಕೆತ್ತಿದರು.


ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.