ಲೋಕಬಂಧು ನ್ಯೂಸ್ l ಉಡುಪಿ
ಇಲ್ಲಿನ ಕುತ್ಪಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ.) ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ ‘ಕ್ಷಮತ್ವಮ್' ಅಂತರರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮ ಮಂಗಳವಾರ ನಡೆಯಿತು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುಷ್ ವಿಭಾಗದ ಡೀನ್ ಹಾಗೂ ಕುಂದಾಪುರ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸಂಜಯ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ಜ್ಞಾನವನ್ನು ವೈಜ್ಞಾನಿಕ ಸಂಶೋಧನೆಯೊಂದಿಗೆ ಬಲಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಸಂಶೋಧನೆ ಮೂಲಕ ಆಯುರ್ವೇದದ ವೈಜ್ಞಾನಿಕ ಆಧಾರಗಳನ್ನು ಸ್ಥಾಪಿಸಿ, ಅದರ ಕೊಡುಗೆಯನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ತಲುಪಿಸಲು ಸಮ್ಮೇಳನ ಪ್ರಮುಖ ವೇದಿಕೆಯಾಗಲಿದೆ ಎಂದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಆಯುರ್ವೇದದ ತತ್ವಗಳು, ಚಿಕಿತ್ಸಾ ವಿಧಾನಗಳು ಮತ್ತು ಔಷಧಗಳ ವೈಜ್ಞಾನಿಕ ದೃಢೀಕರಣಕ್ಕೆ ಬಹುಕೇಂದ್ರೀಯ ಸಂಶೋಧನೆ ಅಗತ್ಯ ಎಂದರು. ಔಷಧಗಳ ಮಾನಕೀಕರಣ ಮತ್ತು ಮಾನ್ಯತೆಗಾಗಿ ವ್ಯಾಪಕ ಅಧ್ಯಯನಗಳ ಅಗತ್ಯವಿದೆ ಎಂದರು.
ಉಪಪ್ರಾಂಶುಪಾಲ ಡಾ.ನಿರಂಜನ್ ಅವರು ‘ಪ್ರಜ್ಞಾನಂ ಬ್ರಹ್ಮ’ ಮಹಾವಾಕ್ಯ ಉಲ್ಲೇಖಿಸಿ, ಸಂಶೋಧನೆಯಿಂದ ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು ಎಂದರು.
ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಪ್ರಾಧ್ಯಾಪಕ ಡಾ. ರವಿಶಂಕರ್, ಪಾಲಕ್ಕಾಡ್ ಸ್ವಾಸ್ಥ್ಯ ಕ್ಷೇತ್ರಂ ಆಯುರ್ವೇದ ಆರೋಗ್ಯ ಕೇಂದ್ರದ ಮುಖ್ಯ ಸಲಹೆಗಾರ ಡಾ.ಎನ್.ವಿ. ಶ್ರೀವತ್ಸ, ಕಾಲೇಜಿನ ಉಪ ಪ್ರಾಂಶುಪಾಲರು (ಕ್ಲಿನಿಕಲ್) ಡಾ.ನಿರಂಜನ್ ಮತ್ತು ಕೊಯಮತ್ತೂರಿನ ಸೆಂಟರ್ ಆಫ್ ಮೆಡಿಕಲ್ ಹೆರಿಟೇಜ್ ಅಧ್ಯಕ್ಷ ಡಾ.ಅಜಯನ್ ಸದಾನಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎಸ್.ಡಿಎಂ ಕಾಲೇಜಿನ ಉಪಪ್ರಾಂಶುಪಾಲ (ಶೈಕ್ಷಣಿಕ) ಡಾ. ನಾಗರಾಜ್ ಎಸ್., ಹಾಗೂ ಕ್ಷಮತ್ವಮ್ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಪ್ರಸನ್ನ ಎನ್. ಮೊಗಸಾಲೆ ಮತ್ತು ಡಾ. ಅರ್ಹಂತ್ ಕುಮಾರ್ ಉಪಸ್ಥಿತರಿದ್ದರು.
ಡಾ.ಅರುಣ್ ಕುಮಾರ್ ಮತ್ತು ಡಾ. ಶುಭಾ ಪಿ.ಯು. ನಿರೂಪಿಸಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ. ವಂದಿಸಿದರು.
ಸ್ವಯಂ ರೋಗ ನಿರೋಧಕ ಕಾಯಿಲೆಗಳಲ್ಲಿ ಅನುವಾದಾತ್ಮಕ ಆಯುರ್ವೇದ’ ವಿಷಯದಲ್ಲಿ ನಡೆಯಲಿರುವ 'ಕ್ಷಮತ್ವಮ್' ಸಮ್ಮೇಳನ ಆಯುರ್ವೇದ ಕ್ಷೇತ್ರದಲ್ಲಿನ ಸಂಶೋಧನೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ.