ಲೋಕಬಂಧು ನ್ಯೂಸ್ ಉಡುಪಿ, ಸೆ.7
ಕಾವ್ಯ ಕ್ಲಿಷ್ಟಕರವಾಗಿದ್ದರೆ ಉತ್ತಮ ಕಾವ್ಯವಾಗುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಸರಳ ಭಾಷೆಯ ಮೂಲಕ ಅನುಭವಗಳನ್ನು ಕಟ್ಟಿಕೊಡಬೇಕು ಎಂದು ಸಾಹಿತಿ ಎಚ್. ಡುಂಡಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಬೆನಗಲ್‌ನ ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಭಾನುವಾರ ನಡೆದ ಕವಿ ಕೂರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಂದು ಕವಿತೆಗಳಲ್ಲೂ ಮರೆಯಲಾರದ ಸಾಲುಗಳು ಇರಬೇಕು. ಆಗ ಆದು ಉತ್ತಮ ಕವಿತೆಯಾಗುತ್ತದೆ ಎಂದವರು ಹೇಳಿದರು.
ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ. ನಿ.ಬೀ. ವಿಜಯ ಬಲ್ಲಾಳ್ ಮಾತನಾಡಿ, ಇಂದು ಒತ್ತಡದ ಬದುಕಿನಲ್ಲಿ ಯಾರಿಗೂ ಸಮಯವಿಲ್ಲದಾಗಿದೆ. ಹಾಗಾಗಿ ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಸಾಹಿತಿ ಡಾ.ಲಕ್ಷ್ಮಣ ವಿ.ಎ. ಮಾತನಾಡಿ, ಕವಿತೆ ಮತ್ತು ಕಲೆ ನಮ್ಮನ್ನು ಜೋಡಿಸುತ್ತದೆ. ಉಡುಪಿ ದೇವಾಲಯಗಳ ನಾಡು ಮಾತ್ರವಲ್ಲ ಸಾಹಿತಿ , ಕಲಾವಿದರ ಊರೂ ಹೌದು ಎಂದರು.
ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಣ ವಿ.ಎ. ಅವರಿಗೆ ಕವಿ ಕೂರಾಡಿ ಸೀತಾರಾಮ ಅಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಜೊತೆ ಕಾರ್ಯದರ್ಶಿ ಜನಾರ್ದನ ಕೊಡವೂರು, ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರ್, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.
ನಾರಾಯಣ ಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂರ್ಣಿಮಾ ಜನಾರ್ದನ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ರಂಜಿನಿ ವಸಂತ್ ವಂದಿಸಿದರು.
ಬಳಿಕ ‘ಡುಂಡಿ 70’ ಅಭಿನಂದನ ಸಮಾರಂಭ ನಡೆಯಿತು.