ವಂದೇ ಮಾತರಂ ಕಾಲ್ನಡಿಗೆ ಜಾಥಾ ಅಭಿಯಾನ ಕರಪತ್ರ ಬಿಡುಗಡೆ

ಲೋಕಬಂಧು ನ್ಯೂಸ್ | ಮಂಗಳೂರು, ಸೆ.1
ಸೆಪ್ಟೆಂಬರ್ 7ರಂದು ಕುಂದಾಪುರದಿಂದ ಆರಂಭಗೊಂಡು ಸಾಸ್ತಾನದಲ್ಲಿ ಸಮಾಪನಗೊಳ್ಳಲಿರುವ ವಂದೇ ಮಾತರಂ ಜನಜಾಗೃತಿ ಅಭಿಯಾನ ಮತ್ತು ಕಾಲ್ನಡಿಗೆ ಜಾಥಾದ ಕರಪತ್ರವನ್ನು 98ರ ಹರೆಯದ ವಯೋವೃದ್ಧ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿ ತನ್ನ ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ವಂದೇ ಮಾತರಂ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿರುವ ರಾಷ್ಟ್ರ ಭಕ್ತರ ಮಂತ್ರ. ವಂದೇ ಮಾತರಂ ಹೆಸರಿನಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಜೊತೆ ತಾನೂ ಪಾಲ್ಗೊಳ್ಳುವುದಾಗಿ ತಿಳಿಸಿದರು.


ದೇಶ ವಂದೇ ಮಾತರಂ ಪರವಾಗಿ ಎದ್ದು ನಿಲ್ಲಬೇಕು. ವಂದೇ ಮಾತರಂ ಕಾಲ್ನಡಿಗೆ ಜಾಥಾ ರಾಷ್ಟ್ರ ಭಕ್ತರೆಲ್ಲರ ನೆರವಿನಿಂದ ಐತಿಹಾಸಿಕ ದಾಖಲೆಯಾಗಲಿ ಎಂದವರು ಹಾರೈಸಿದರು.


ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಲೋಕಸಭಾ ಸದಸ್ಯ ಬೃಜೇಶ್ ಚೌಟ, ಪಕ್ಷ ಪ್ರಮುಖರಾದ ರಮೇಶ್ ಕಂದೆಟ್ಟು, ಸಂಜಯ್ ಪ್ರಭು ಮೊದಲಾದವರಿದ್ದರು.