ದೇಶದ ಅಭಿವೃದ್ಧಿಯಲ್ಲಿ ಎಲ್ಐಸಿ ಪಾತ್ರ ಹಿರಿದು

ಲೋಕಬಂಧು ನ್ಯೂಸ್ | ಉಡುಪಿ, ಸೆ.1
ವಿಮಾರಂಗದ ಅಗ್ರಗಣ್ಯ ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಮನೀಯ ಪಾತ್ರ ವಹಿಸಿದೆ ಎಂದು ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಭಟ್ ಹೇಳಿದರು.
ಎಲ್ಐಸಿ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
1956ರ ಸೆ.1ರಂದು 245 ಸಂಸ್ಥೆಗಳ ಒಗ್ಗೂಡುವಿಕೆಯಿಂದ ರಾಷ್ಟ್ರೀಕರಣಗೊಂಡ ಎಲ್ಐಸಿ ಇಂದು ಬೃಹದಾಕಾರವಾಗಿ ಬೆಳೆದಿದೆ. ಜನತೆಯಲ್ಲಿ ಉಳಿತಾಯ ಪ್ರಜ್ಞೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಆರ್ಥಿಕ ನೆರವಿನ ಧ್ಯೇಯದೊಂದಿಗೆ ಆರಂಭಗೊಂಡ ಸಂಸ್ಥೆ ಅನೇಕ ಯೋಜನೆಗಳಿಗೆ ಸಹಕಾರಿಯಾಗಿದೆ ಎಂದ ಗಣಪತಿ ಭಟ್ ಅವರು ಕೈಗಾ ಮತ್ತು ಆಲಮಟ್ಟಿ ಯೋಜನೆಗಳನ್ನು ಉದಾಹರಿಸಿದರು.
ಕೇಂದ್ರ ಸರ್ಕಾರದ ಒಡೆತನದ ಈ ಸಂಸ್ಥೆ ಪ್ರಸ್ತುತ ಶೇರು ಮಾರುಕಟ್ಟೆಯನ್ನೂ ಪ್ರವೇಶಿಸಿದ್ದು ವಿಮಾ ಪ್ರತಿನಿಧಿಗಳ ಮೂಲಕ ವಿವಿಧ ವಿಮಾ ಯೋಜನೆಗಳನ್ನು ವಿಕ್ರಯಿಸುತ್ತಿದೆ ಎಂದರು.


ಕಳೆದ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗ ಗಮನೀಯ ಸಾಧನೆ ಮಾಡಿದ್ದು 1,33,316 ಪಾಲಿಸಿ ವಿಕ್ರಯಿಸುವ ಮೂಲಕ 508.7 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ. 1,39,693 ಪಾಲಿಸಿಗಳ 1,138.75 ಕೋಟಿ ರೂ. ಕ್ಲೈಮ್ ಪಾವತಿಸಿದೆ. ವಿಮಾ ಕ್ಲೈಮ್ ಪಾವತಿಯಲ್ಲಿ 99.44 ಶೇ. ಸಾಧನೆಯ ಮೂಲಕ ಜಾಗತಿಕವಾಗಿ ಎಲ್ಐಸಿ ಪ್ರಥಮ ಸ್ಥಾನದಲ್ಲಿದೆ ಎಂದರು.


ಯೂನಿಯನ್ ಬ್ಯಾಂಕ್ ಉಡುಪಿ ಏರಿಯಾ ಹೆಡ್ ಅಶೋಕ್ ಬಾಂಡಗಿ ಮುಖ್ಯ ಅತಿಥಿಯಾಗಿದ್ದರು. ಎಲ್ಐಸಿ ಮಾರುಕಟ್ಟೆ ಪ್ರಬಂಧಕ ಗುರುದಾಸ್ ಎಸ್.ರಾವ್ ಇದ್ದರು.


ಎಲ್ಐಸಿ ಪ್ರಬಂಧಕ (ವಿಕ್ರಯ) ದುರ್ಗಾರಾಮ್ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಉಪಶ್ರೇಣಿ ಸಹಾಯಕ ಬಾಲಕೃಷ್ಣ ಶೆಣೈ ಸಹಕರಿಸಿದರು.


ಈ ಸಂದರ್ಭದಲ್ಲಿ ನಿವೃತ್ತರಾಗಲಿರುವ ಉದ್ಯೋಗಿಗಳನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂಚರಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ವಿಮಾ ಸಪ್ತಾಹ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆ.7ರಂದು ಸಮಾರೋಪ ಸಮಾರಂಭ ನಡೆಯಲಿದೆ.