ಪುತ್ತೂರು ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ

ಲೋಕಬಂಧು ನ್ಯೂಸ್ | ಪುತ್ತೂರು, ಸೆ.2
ಶಾಸಕ ಅಶೋಕ್ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಬೆಂಬಲಿಗರ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇಲ್ಲಿನ ಪ್ರೆಸ್ ಕ್ಲಬ್ ಮುಂಭಾಗ ಮಂಗಳವಾರ ಹೈಡ್ರಾಮಾ, ಗಲಾಟೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರ ಆಡಳಿತ ವೈಫಲ್ಯಗಳನ್ನು ಎತ್ತಿಹಿಡಿದು ಆಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಈ ಆಡಿಯೋ ಭಾರೀ ವೈರಲ್ ಆಗಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು.


ಈ ಆಡಿಯೋ ಕುರಿತು ಸ್ಪಷ್ಟನೆ ಹಾಗೂ ಹೆಚ್ಚಿನ ವಿವರ ನೀಡಲು ಹಕೀಂ ಕೂರ್ನಡ್ಕ ಅವರು ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.


ಹಕೀಂ ಪತ್ರಿಕಾಗೋಷ್ಠಿಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಅಶೋಕ್ ರೈ ಅವರ ಬೆಂಬಲಿಗರು ಶಾಸಕರ ಸಮ್ಮುಖದಲ್ಲೇ ಪ್ರೆಸ್ ಕ್ಲಬ್ ಮುಂಭಾಗ ಜಮಾಯಿಸಿ ಹಕೀಂ ವಿರುದ್ಧ ಕೆಂಡಾಮಂಡಲರಾದರು.


ಹಕೀಂ ಕೂರ್ನಡ್ಕ ಅವರನ್ನು ಪ್ರೆಸ್ ಕ್ಲಬ್‌ನಿಂದ ಹೊರಗಡೆ ಕಳುಹಿಸುವಂತೆ ಏರುಧ್ವನಿಯಲ್ಲಿ ಕೂಗಾಡಿದ ಬೆಂಬಲಿಗರು ಅವರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದರು. ಈ ವೇಳೆ ಹಕೀಂ ಅವರ ಇಬ್ಬರು ಬೆಂಬಲಿಗರ ಮೇಲೆ ಹಲ್ಲೆ ಯತ್ನ ನಡೆಯಿತು.


ಸ್ಥಳದಲ್ಲಿದ್ದ ಪೊಲೀಸರು ಶಾಸಕರ ಬೆಂಬಲಿಗರನ್ನು ನಿಯಂತ್ರಿಸಲು ಹಾಗೂ ಹಕೀಂ ಕೂರ್ನಡ್ಕರನ್ನು ಸುರಕ್ಷಿತವಾಗಿ ಹೊರತರಲು ಹರಸಾಹಸಪಟ್ಟರು. ಅಂತಿಮವಾಗಿ ಪೊಲೀಸ್ ಭದ್ರತೆ ನಡುವೆ ಹಕೀಂ ಅವರನ್ನು ಪ್ರೆಸ್ ಕ್ಲಬ್‌ನಿಂದ ಹೊರತಂದು ಪೊಲೀಸ್ ವಾಹನದಲ್ಲೇ ಅವರ ಮನೆಗೆ ಕರೆದೊಯ್ಯಲಾಯಿತು.


ಬಳಿಕ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಅಶೋಕ್ ರೈ ಅವರ ಬೆಂಬಲಿಗರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.


ಪುತ್ತೂರು ಕಾಂಗ್ರೆಸ್‌ನ ಕಾರ್ಯಕರ್ತ- ಶಾಸಕ ಬೆಂಬಲಿಗರ ಬಹಿರಂಗ ಗಲಾಟೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.