ಶ್ರದ್ಧಾಭಕ್ತಿಯ ಭಜನೆಯಿಂದ ಜೀವನ ಪಾವನ

ಲೋಕಬಂಧು ನ್ಯೂಸ್ | ಉಜಿರೆ
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಟ ಒಂದು ಗಂಟೆಯಾದರೂ ನಾವು ಮನೆಯಲ್ಲಿ ಪರಿಶುದ್ಧ ತನು, ಮನ ಮತ್ತು ನಾಲಗೆಯಿಂದ ಶ್ರದ್ಧಾಭಕ್ತಿಯಿಂದ ದೇವರ ಭಜನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಲಿಯುಗದಲ್ಲಿ ನಾವು ಅನ್ನ- ನೀರು ಬಿಟ್ಟು ತಪಸ್ಸು ಮಾಡಲು ಸಾಧ್ಯವಿಲ್ಲ. ಆದ್ದರಿಂದ ದೇವರು ಕೊಟ್ಟ ತನು, ಮನ, ನಾಲಗೆ ಮತ್ತು ವಿವೇಕವನ್ನು ಬಳಸಿ ಭಜನೆ ಮಾಡಿದಾಗ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದರು.


ಧರ್ಮಸ್ಥಳದ ಚರ್ತುದಾನ ಪರಂಪರೆಯನ್ನು ಉಳಿಸಿ, ಬೆಳೆಸುವುದರೊಂದಿಗೆ ಎಲ್ಲರ ಮನೆ ಮತ್ತು ಮನಗಳಲ್ಲಿ ಭಜನಾ ಸಂಸ್ಕೃತಿ ಬಗ್ಗೆ ಅರಿವು, ಜಾಗೃತಿ ಹಾಗೂ ಉತ್ತಮ ಸಂಸ್ಕಾರದೊಂದಿಗೆ ಧರ್ಮಜಾಗೃತಿ ಕಾರ್ಯ ಮಾಡುತ್ತಿರಯವ ಡಾ‌ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ದಂಪತಿಯ ಸೇವಾಕಾರ್ಯವನ್ನು ಸ್ವಾಮೀಜಿ ಶ್ಲಾಘಿಸಿ, ಅಭಿನಂದಿಸಿದರು.


ಪ್ರಗತಿಯ ರೂವಾರಿಗಳಾಗಬೇಕು
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ‌ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಇಲ್ಲಿ ತರಬೇತಿ ಪಡೆದ ಭಜನಾ ಪಟುಗಳು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು. ಆದರ್ಶ ನಾಯಕರಾಗಿ ಊರಿನ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿ, ಮಕ್ಕಳಿಗೂ ಭಜನಾ ಸಂಸ್ಕೃತಿ ಕೊಡಬೇಕು ಎಂದರು.
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿದರು.


ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.


ವಿದುಷಿ ಚೈತ್ರಾ ಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.


ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿ, ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ವಂದಿಸಿದರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು. ಡಾ.ಶಶಿಕಾಂತ ಜೈನ್‌ ಅವರ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು.


123 ಭಜನಾ ಮಂಡಳಿಗಳ 204 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.