ಲೋಕಬಂಧು ನ್ಯೂಸ್ ಉಡುಪಿ, ಸೆ.8
ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ ಕೇರಳದ ಓಣಂ ಹಬ್ಬದ ವೈಭವವೂ ಕಳೆಗಟ್ಟಿತು. ಕೇರಳ ಸಮಾಜಂ ಉಡುಪಿ ವತಿಯಿಂದ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಓಣಂ ಸಂಭ್ರಮಾಚರಣೆ ಸಾಂಸ್ಕೃತಿಕ ವೈವಿಧ್ಯ, ಸಂಗೀತ, ನೃತ್ಯ, ಕ್ರೀಡೆ ಹಾಗೂ ಆಹಾರ ಪದ್ಧತಿಗಳ ಮೂಲಕ ಕರಾವಳಿಗರ ಮನಸೆಳೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಲಯಾಳಂ ಚಿತ್ರರಂಗದ ನಟಿ ನೀನಾ ಕುರುಪ್, ಓಣಂ ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಕೇರಳದಾದ್ಯಂತ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೇರಳದ ಹೊರಭಾಗದಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಓಣಂ ಸಂಭ್ರಮಾಚರಣೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಸಂಘಟನೆ ಆರಂಭವಾಗಿ ಕೆಲವೇ ವರ್ಷಗಳಾಗಿದ್ದರೂ ಮೊದಲ ವರ್ಷದ ಓಣಂ ಆಚರಣೆಗೆ ಅಭೂತಪೂರ್ವ ಬೆಂಬಲ ದೊರಕಿತ್ತು. ಇದೀಗ ಎರಡನೇ ವರ್ಷದ ಕಾರ್ಯಕ್ರಮಕ್ಕೂ ನಿರೀಕ್ಷೆಗೂ ಮೀರಿ ಕೇರಳ ಸಮಾಜಂ ಸದಸ್ಯರು ಹಾಗೂ ಉಡುಪಿ ಜಿಲ್ಲೆಯ ಜನತೆ ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂಘಟನೆಗೆ ಮತ್ತಷ್ಟು ಬಲ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಕೇರಳದ ಅತಿ ಕಿರಿಯ ವಯಸ್ಸಿನ ಬಾಲ ಗಾಯಕಿ ರಾನಿಯಾ ರಫೀಕ್ ಅವರ ಸುಮಧುರ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ತಿರುವಾದಿರ ಮತ್ತು ಮೊಹಿಣಿಯಾಟ್ಟಂ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು. ಜೊತೆಗೆ ಯುವ ಪೀಳಿಗೆಯ ಫ್ಯಾಷನ್ ಶೋ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಹೊರಾಂಗಣ ಕ್ರೀಡೆಗಳಲ್ಲೂ ಸಮಾಜ ಬಾಂಧವರು ಹಾಗೂ ಯುವಜನರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಒಟ್ಟಾರೆಯಾಗಿ ಕೇರಳದಿಂದ ಉಡುಪಿಗೆ ಬಂದು ನೆಲೆಸಿರುವ ಮಲಯಾಳಿ ಸಮುದಾಯದವರು ತಮ್ಮ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ವೈವಿಧ್ಯವನ್ನು ಕರಾವಳಿಯ ಜನತೆಗೆ ಪರಿಚಯಿಸಿದ ಈ ಓಣಂ ಸಂಭ್ರಮಾಚರಣೆಯಲ್ಲಿ ಉಡುಪಿ ಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇರಳದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಣ್ತುಂಬಿಕೊಂಡರು.
ಕಾರ್ಯಕ್ರಮದಲ್ಲಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಅಭಿಲಾಷ್ ಪಿ.ವಿ., ಬಾಲಕಲಾವಿದೆ ರಾನಿಯಾ ರಫೀಕ್, ಕೇರಳ ಸಮಾಜಂ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು.