ಲೋಕಬಂಧು ನ್ಯೂಸ್ | ನವದೆಹಲಿ, ಸೆ.24
ಗುರುಕುಲಗಳ ಮೂಲಕ ಧರ್ಮಶಾಸ್ತ್ರಗಳ ಸಂರಕ್ಷಣೆಯ ಕಾರ್ಯ ಅತೀ ಅವಶ್ಯಕ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.
ಇಲ್ಲಿನ ವಸಂತ್ ಕುಂಜ್ ಪೇಜಾವರ ಶಾಖಾಮಠ ಶ್ರೀ ವೇದವ್ಯಾಸ ಗುರುಕುಲದ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಬುಧವಾರ ಭೇಟಿ ಮಾಡಿ, ಶ್ರೀಗಳಿಂದ ಗೌರವ ಸ್ವೀಕರಿಸಿ ಮಾತನಾಡಿದರು.
ಸಮಾಜ ಸುಧಾರಣೆಯ ಕಾರ್ಯದಲ್ಲಿ ಪೇಜಾವರ ಮಠ ಹಾಗೂ ಶ್ರೀಗಳ ಕಾರ್ಯ ಗಮನೀಯ. ಚಾತುರ್ಮಾಸ್ಯದ ಅವಧಿಯಲ್ಲೂ ವಿವಿಧ ಕಾಲೊನಿಗಳ ಭೇಟಿ ಅತ್ಯಂತ ಅಭಿನಂದನೀಯ.
ಪೇಜಾವರ ಮಠ ಹಲವು ದಶಕಗಳಿಂದ ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಬಂಧುಗಳ ಬಡಾವಣೆಗಳಿಗೆ ಭೇಟಿ ನೀಡಿ ಜಾಗೃತಿ ಕಾರ್ಯವನ್ನು ನಡೆಸುತ್ತಿರುವುದು ಸ್ತುತ್ಯರ್ಹವಾಗಿದೆ ಎಂದರು.
ಉಪರಾಷ್ಟ್ರಪತಿಗಳನ್ನು ಸಾಂಪ್ರದಾಯಿಕ ಪೂರ್ಣಕುಂಭ ಮತ್ತು ಗುರುಕುಲದ ಮಕ್ಕಳ ವೇದಘೋಷದೊಂದಿಗೆ ಸ್ವಾಗತಿಸಲಾಯಿತು.
ಚಾತುರ್ಮಾಸ್ಯ ಸೇವಾ ಸಮಿತಿ ಪ್ರಮುಖರಾದ ಶಾಸಕ ಅನಿಲ್ ಶರ್ಮ, ಕೈಲಾಸ್ ಗೆಹ್ಲೋಟ್ ಮತ್ತು ರಾಕೇಶ್ ಗೌರ್, ಮಠದ ಅಧಿಕಾರಿಗಳಾದ ವಿ.ಕೆ.ಹರಿದಾಸ್, ಪಿಆರ್.ಒ. ವಾಸುದೇವ ಭಟ್, ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್, ಗುರುಕುಲದ ಪ್ರಾಚಾರ್ಯ ಡಾ.ವಿಠೋಬಾಚಾರ್ಯ, ದೇವೇಂದರ್, ಕಾರ್ಪೊರೇಟರ್ ಇಂದೋರ್ ಜಿತ್ ಸೆರಾವತ್ ಉಪಸ್ಥಿತರಿದ್ದರು.
