ಸೌಜನ್ಯ ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಲಿ

ಲೋಕಬಂಧು ನ್ಯೂಸ್ ಬೆಳ್ತಂಗಡಿ
ಹದಿನಾಲ್ಕು ವರ್ಷಗಳ ಹಿಂದೆ ನಡೆದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು  ಅಂದು ತನಿಖೆ ಮಾಡಿದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು ಮರು ತನಿಖೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿರುವುದು ಸ್ವಾಗತಾರ್ಹ. ತನಿಖೆಯನ್ನು ಯಾರೇ ಮಾಡಲಿ, ನ್ಯಾಯಯುತವಾಗಿ ಮಾಡಲಿ ಎಂಬುದೇ ನಮ್ಮ ಆಶಯ ಎಂದು ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.ಮಂಗಳವಾರ ತನ್ನ ಮನೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಕಾನ್ಸ್‌ಟೇಬಲ್ ನೇತೃತ್ವದ ತಂಡ ಬೇಕಾದರೂ ತನಿಖೆ ಮಾಡಲಿ, ನಮಗೆ ನ್ಯಾಯ ಸಿಗಬೇಕು. ಅತ್ಯಾಚಾರಿ ಯಾರೆಂದು ಗೊತ್ತಾಗಬೇಕು ಎಂದರು.
ರಾಜ್ಯ ಗೃಹಮಂತ್ರಿಯೇ ಪ್ರಕರಣದ ಉತ್ತರದಾಯಿತ್ವ ಹೊಂದಿದ್ದಾರೆ. ನ್ಯಾಯಯುತವಾಗಿ ತನಿಖೆ ನಡೆಸುವಂತೆ ಅವರು ನೋಡಿಕೊಳ್ಳಬೇಕು.


ಪ್ರಕರಣದಲ್ಲಿ ಸಂತೋಷ್ ರಾವ್ ಅಲ್ಲದಿದ್ದರೆ ಇನ್ಯಾರು ಈ ಕೃತ್ಯ ಎಸಗಿರುವುದು ಎಂಬುದನ್ನು ಎಸ್‌ಐಟಿ ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ಸಿಕೊಡಬೇಕು ಎಂದರು.


ಮುಂದಿನ ಅಕ್ಟೋಬರ್ 10ಕ್ಕೆ ಸೌಜನ್ಯ ದಾರುಣ ಸಾವು ನಡೆದು 14 ವರ್ಷ ಪೂರ್ಣಗೊಳ್ಳಲಿದ್ದು, ಇಷ್ಟು ವರ್ಷ ಕಾಲ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ, ಸೆ.22ರಂದು ಹೊಸ ಎಸ್‌ಐಟಿ ರಚಿಸಿ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.


2012ರಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಮತ್ತು ತದನಂತರ ಕೇಂದ್ರದ ಸಿಬಿಐ ನಡೆಸಿದ ಕಳಪೆ ತನಿಖೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, 'ನೀವು ಯಾರನ್ನು ರಕ್ಷಣೆ ಮಾಡಲು ತನಿಖೆ ಮಾಡಿದ್ದೀರಿ?' ಎಂದು ಪ್ರಶ್ನಿಸಿರುವುದು ಪ್ರಭಾವಿಗಳನ್ನು ರಕ್ಷಿಸುತ್ತಿರುವ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಮರೋಡಿ
ಹೇಳಿದರು.


ಸುದೀರ್ಘ ಹೋರಾಟದ ಬಳಿಕ ಮರುತನಿಖೆಗೆ ಆದೇಶ ಹೊರಬಂದಿರುವುದು ನ್ಯಾಯಾಂಗ ವ್ಯವಸ್ಥೆಯ ಐತಿಹಾಸಿಕ ಮೈಲಿಗಲ್ಲು ಹಾಗೂ ಅಸಹಾಯಕ ಜನಸಾಮಾನ್ಯರಿಗೆ ನಂಬಿಕೆ ಮೂಡಿಸುವ ಆಶಾಕಿರಣವಾಗಿದೆ ಎಂದರು.


ಹೋರಾಟಗಾರ ಗಿರೀಶ್ ಮಟ್ಟೆಣ್ಣವರ್ ಮಾತನಾಡಿ, ನೈಜ ಆರೋಪಿ ಯಾರೆಂದು ಗೊತ್ತಾಗಬೇಕು,ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೊಸದಾಗಿ ರಚನೆಯಾಗಿರುವ ಎಸ್‌ಐಟಿ ತಂಡ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.


ಧರ್ಮಸ್ಥಳ ಪ್ರಕರಣದಲ್ಲಿ ಹಿಂದೆ ರಚಿಸಲಾದ ಎಸ್‌ಐಟಿ ತನಿಖಾ ತಂಡದ ವರದಿಯನ್ನು ತಕ್ಷಣ ಬಹಿರಂಗಪಡಿಸಬೇಕು ಎಂದರು.