ಲೋಕಬಂಧು ನ್ಯೂಸ್ ಉಡುಪಿ, ಸೆ.25
ಉದ್ಯಾವರ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ವತಿಯಿಂದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಸೆ.30 ಮತ್ತು ಅ.1ರಂದು 'ಕ್ಷಮತ್ವಮ್-2026' ಆರನೇ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಮ್ಮೇಳನದ ಮುನ್ನ ಸೆ.29ರಂದು ಪೂರ್ವಭಾವಿ ಕಾರ್ಯಾಗಾರ ನಡೆಯಲಿದೆ. ಸಮ್ಮೇಳನದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು, ವೈದ್ಯರು, ಶಿಕ್ಷಕರು ಹಾಗೂ ಆಯುರ್ವೇದ ಕ್ಷೇತ್ರದ ಪರಿಣಿತರು ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ಆಯುರ್ವೇದದ ದೃಷ್ಟಿಕೋನದಿಂದ ಆಟೋ ಇಮ್ಯೂನ್ ಕಾಯಿಲೆಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ ಎಂದವರು ವಿವರಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು. ಎರಡು ದಿನಗಳ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಳು, ವಿಶೇಷ ವೈಜ್ಞಾನಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು, ಸಂಶೋಧನಾ ಪ್ರಬಂಧ ಮಂಡನೆ ಹಾಗೂ ಪೋಸ್ಟರ್ ಪ್ರದರ್ಶನಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಚೈತ್ರಾ ಹೆಬ್ಬಾರ್, ಡಾ.ನಾಗರಾಜ್, ಡಾ.ಪ್ರಸನ್ನ ಮೊಗಸಾಲೆ, ಡಾ.ಅನಂತ್ ಕುಮಾರ್, ಡಾ.ಅರ್ಪಣಾ ಜೈನ್, ಡಾ.ಶ್ರೀನಿಧಿ ಬಲ್ಲಾಳ್ ಇದ್ದರು.