ಹೆತ್ತಬ್ಬೆಯನ್ನೇ ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ!

ಲೋಕಬಂಧು ನ್ಯೂಸ್ | ಬ್ರಹ್ಮಾವರ
ಹೆತ್ತ ತಾಯಿಯನ್ನೇ ತನ್ನ ಕಾರಿನಲ್ಲಿ ಕರೆತಂದು ಸ್ವಂತ ಮಗ, ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ಸೋಮವಾರ ನಡೆದಿದೆ.ದಿಕ್ಕು ತೋಚದೆ ಪರದಾಡುತ್ತಿದ್ದ 70ರ ಹರೆಯದ ವೃದ್ಧೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಪೊಲೀಸ್ ಸಿಬ್ಬಂದಿ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಲ್ಲಿನ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದ್ದು, ಕೂಡಲೇ ಅವರು ಸಮಾಜಸೇವಕ ಉಡುಪಿಯ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.


ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಅವರು ತುರ್ತು ಪೊಲೀಸ್‌ ಸಹಾಯವಾಣಿ ಸಿಬ್ಬಂದಿ ನೆರವಿನಿಂದ ವೃದ್ಧೆಯನ್ನು ಸುರಕ್ಷಿತವಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.


ಆಸ್ಪತ್ರೆಗೆ ಸ್ರೇರಿಸಿದವರ ಎದುರು ಕಣ್ಣೀರಿಟ್ಟ ವೃದ್ಧೆ, ಆಸ್ಪತ್ರೆಯ ದಾಖಲಾತಿ ವೇಳೆ ತನ್ನ ಹೆಸರು ಸರಸ್ವತಿ (70) ಹಾಗೂ ತಮಿಳುನಾಡಿನ ತಿರುವಳ್ಳೂರು ನಿವಾಸಿ ಎಂದು ತಿಳಿಸಿದ್ದಾರೆ. ತನ್ನ ಸ್ವಂತ ಮಗನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.


ಘಟನೆ ಕುರಿತು ನಿತ್ಯಾನಂದ ಒಳಕಾಡು ಅವರು ಬ್ರಹ್ಮಾವರ ಮಹಿಳಾ ಪೊಲೀಸ್‌ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.


ವೃದ್ಧೆಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲನೆ ನಡೆಯಬೇಕಿದ್ದು, ಆಕೆಯ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಕ್ರಮ ವಹಿಸಲಾಗಿದೆ.