ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಸೆ.5 
ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರಿಗೆ ಬಹುದೊಡ್ಡ ಜವಾಬ್ದಾರಿ ಇದೆ. ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣವೇ ಮೂಲ ಅಡಿಪಾಯ. ಶಿಕ್ಷಕರ ಜೀವನ ಶೈಲಿ, ಅವರ ವಿಚಾರಧಾರೆಗಳನ್ನು ಮಕ್ಕಳು ಅನುಸರಿಸುತ್ತಾರೆ. ಮಕ್ಕಳ ಭವಿಷ್ಯ ರೂಪಿಸಲು ಪ್ರತ್ಯಕ್ಷ ಹಾಗೂ ಪರೋಕ್ಷ ಕೊಡುಗೆ ನೀಡುತ್ತಿರುವ ಶಿಕ್ಷಕರು ನಿಷ್ಠೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಲ್ಲಿನ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಬ್ರಹ್ಮಾವರ ವಲಯ ಆಶ್ರಯದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಗೀತಾನಂದ ಫೌಂಡೇಶನ್ ಕೋಟ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ವ್ಯಕ್ತಿಯೇ ಶಿಕ್ಷಕ. ತಮ್ಮ ಜೀವನದುದ್ದಕ್ಕೂ ಶಿಕ್ಷಣದ ಅರಿವು ಮೂಡಿಸಿ ಜ್ಞಾನಾರ್ಜನೆಯನ್ನು ಎರಕ ಹೊಯ್ಯುವ ಶಿಕ್ಷಕರು ಮಕ್ಕಳ ಪಾಲಿಗೆ ದೇವರು ಎಂದು ಸಂಸದ ಕೋಟ ಅಭಿಪ್ರಾಯ ವ್ಯಕ್ತಪಡಿಸಿದರು.


ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆಯಂತೆ ಶಿಕ್ಷಕರು ಕೇವಲ ಬೋಧಿಸುವ ಅಧಿಕಾರಿಯಲ್ಲ. ಬದಲಾಗಿ ಎಳೆಯ ಮಕ್ಕಳಲ್ಲಿ ಶಿಕ್ಷಣದ ಮೂಲಕ ರಾಷ್ಟ್ರಪ್ರೇಮ ಬಿತ್ತುವ, ಅವರ ಪ್ರತಿಭೆಗಳನ್ನು ಹೊರಹೊಮ್ಮಲು ಪ್ರೋತ್ಸಾಹಿಸುವ ಗುರು. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.


ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಸರ್ಕಾರದ ಜೊತೆಗೆ ದಾನಿಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಜಿಲ್ಲೆಯ ಶ್ರೇಷ್ಠತೆ, ಶಕ್ತಿ ಸಾಮರ್ಥ್ಯವನ್ನು ನಿರೂಪಿಸುವ ಹಲವಾರು ಕಾರ್ಯಕ್ರಮಗಳಿಗೆ ದಾನಿಗಳು ಒತ್ತುನೀಡುತ್ತಿರುವುದು ಈ ಜಿಲ್ಲೆಯ ವಿಶೇಷತೆಯನ್ನು ರೂಪಿಸುತ್ತದೆ ಎಂದ ಅವರು ಸಮಾಜ ಮತ್ತು ಜಿಲ್ಲೆಯೆ ಒಳಿತಿಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿರಬೇಕು ಎಂದು ಆಶಿಸಿದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರೊಂದಿಗೆ  ಶಿಕ್ಷಕದಿದ್ದು ಮಕ್ಕಳ ತಪ್ಪು ಒಪ್ಪುಗಳನ್ನು ತಿದ್ದಿ, ತೀಡಿ, ಸುಸಂಸ್ಕೃತರನ್ನಾಗಿ ಮಾಡುವುದರೊಂದಿಗೆ ಸನ್ನಡತೆಯ ದಾರಿಗೆ ತರುತ್ತಿದ್ದಾರೆ. ಸರ್ಕಾರ ಕರಾವಳಿ ಸೇರಿದಂತೆ ಇತರ ಭಾಗದಲ್ಲಿ ಮುಚ್ಚುವ ಹಂತದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನ ಮಾಡುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಅವರ ಜೀವನಕ್ಕೆ ಹೊಸ ರೂಪ ನೀಡಬೇಕು ಎಂದರು.


ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದು ಅದಕ್ಕೆ ಪೋಷಕರು, ಮಕ್ಕಳು, ಆಡಳಿತ ವರ್ಗದ ಜೊತೆಗೆ ಶಿಕ್ಷಕರೂ ಕಾರಣ. ಮಕ್ಕಳ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸುತ್ತಿದ್ದು ಮಕ್ಕಳ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ. ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಅನೇಕ ಒತ್ತಡ ಪರಿಸ್ಥಿತಿಗಳನ್ನು ಎದುರಿಸಿದರೂ ಮಕ್ಕಳ ಯಶಸ್ಸಿಗೆ ದಾರಿದೀಪವಾಗಿ ನಿಂತಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ತಿಳಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆ ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರ ಸುಧಾರಣೆ ಆಗುತ್ತಿದ್ದು ಅದಕ್ಕೆ ಶಿಕ್ಷಕರ ಕೊಡುಗೆಯೂ ಕಾರಣ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು, ಹೊಸ ಚಿಂತನೆಗಳು, ಅವರ ಆಲೋಚನೆಗಳಿಗೆ ಜೀವ ತುಂಬಬೇಕು. ಸಮಾಜದಲ್ಲಿ ಬದಲಾವಣೆ ನಿರಂತರ ಪ್ರಕ್ರಿಯೆಯಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.


ನಿವೃತ್ತ ಪ್ರಾಂಶುಪಾಲ ಬಿ ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ವಿಶೇಷ ಉಪನ್ಯಾಸ ನೀಡಿ, ಮಕ್ಕಳನ್ನು ಸತ್ಪ್ರಜೆಗಳಾಗಿಸುವಲ್ಲಿ ಪೋಷಕರೊಂದಿಗೆ ಶಿಕ್ಷಕರ ಹೊಣೆಗಾರಿಯೂ ಇದೆ. ಶಿಕ್ಷಕ ಜ್ಞಾನ, ಕೌಶಲ್ಯ, ಮತ್ತು ಮೌಲ್ಯಗಳನ್ನು ಕಲಿಸುವ ಅಥವಾ ಮಾರ್ಗದರ್ಶನ ನೀಡುವ ವ್ಯಕ್ತಿ. ಅವರ ಮಾರ್ಗದರ್ಶನವನ್ನು ಮಕ್ಕಳು ಪಾಲಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಜೊತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಬೇಕು. ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಹೊಸ ತನವನ್ನು ರೂಢಿಸಿಕೊಳ್ಳಬೇಕು ಎಂದರು.


ಅತ್ಯುತ್ತ,ಮ ಶಿಕ್ಷಕ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೈಂದೂರು ತಾಲೂಕು ಸಾಲಿಮಕ್ಕಿ ಸರ್ಕಾರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಗಣೇಶ್, ಬ್ರಹ್ಮಾವರ ತಾಲೂಕು ಆಲಡ್ಕ ಸರ್ಕಾರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ರವಿ, ಕುಂದಾಪುರ ತಾಲೂಕು ಅಲ್ಬಾಡಿ ಮೂರುಕೈ ಸರ್ಕಾರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಉಷಾಕುಮಾರಿ ಹಾಗೂ ಟಿ.ಟಿ. ರೋಡ್ ಸರ್ಕಾರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಲೀಲಾವತಿ ನಾಯ್ಕ, ಉಡುಪಿ ತಾಲೂಕು ವಳಕಾಡು ಸರಕಾರಿ ಮಾದರಿ ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸುವಾಸಿನಿ, ಕಾರ್ಕಳ ತಾಲೂಕು ಹೆರ್ಮುಂಡೆ  ಸರ್ಕಾರಿ  ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಶ್ರೀಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬ್ರಹ್ಮಾವರ ಹೇರೂರು ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಂಜುಳ ಜಯಕರ್, ಕುಂದಾಪುರ ನೂಜಾಡಿ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ ಮತ್ತು ಬೀಜಾಡಿ ಪಡು ಸ.ಹಿ.ಪ್ರಾ. ಶಾಲಾ ಸಹ ಶಿಕ್ಷಕಿ ಪಾರ್ವತಿ ಎಂ., ಕಾರ್ಕಳ ಕಲ್ಯಾ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ವೀಣಾ ಆರ್. ಹಾಗೂ ಉಡುಪಿ ಪಡುಅಲೆವೂರು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ. ಅವರನ್ನು ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಬ್ರಹ್ಮಾವರ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹ ಶಿಕ್ಷಕ ಕೃಷ್ಣ ಶೆಟ್ಟಿ, ಬೈಂದೂರು ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹ ಶಿಕ್ಷಕ ರವಿರಾಜ್ ಶೆಟ್ಟಿ, ಕಾರ್ಕಳ ಶ್ರೀ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ನಾರಾಯಣ ಶೆಣೈ, ಉಡುಪಿ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ಹಾಗೂ ಕುಂದಾಪುರ ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿಯುಷ್ ಡಿ'ಸೋಜಾ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಲಾಯಿತು.


ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಡಾ.ಅಶೋಕ್ ಕಾಮತ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಶಾಲಿನಿ ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಮೊದಲಾದವರಿದ್ದರು


ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ. ಸ್ವಾಗತಿಸಿದರು. ಮಂಜುಳಾ ಜಯಕರ್ ಮತ್ತು ಸತೀಶ್ಚಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ. ವಂದಿಸಿದರು.