ಚಿತ್ರಕೂಟದಲ್ಲಿ ಅಕ್ಕರೆಯ ಆರೈಕೆ

ಲೋಕಬಂಧು ನ್ಯೂಸ್ | ಕುಂದಾಪುರ
ಚಿತ್ರಕೂಟದಲ್ಲಿ ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಅಕ್ಕರೆಯಿಂದ ಉಪಚರಿಸುವ ಅಪೂರ್ವ ವಾತಾವರಣ ಇದೆ ಎಂದು ಪ್ರಾಧ್ಯಾಪಕ ಡಾ.ಪ್ರದೀಪ್‌ ಕೆಂಚನೂರು ಹೇಳಿದರು.
ಇಲ್ಲಿಗೆ ಸಮೀಪದ ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಚಿತ್ರಕೂಟ ಆಯುರ್ವೇದ ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಸಮಾಜದ ಎಲ್ಲ ವರ್ಗ, ಜಾತಿ- ಧರ್ಮದ ಜನರನ್ನು ಪ್ರೀತಿಯಿಂದ ಒಳಗೊಂಡು ಮುನ್ನಡೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯ, ದೇಶ- ವಿದೇಶಗಳ ಅತಿಥಿಗಳು ಇಲ್ಲಿಗೆ ಬಂದು ಸ್ವಾಸ್ಥ್ಯ ಕಂಡುಕೊಳ್ಳುತ್ತಿರುವುದು ಸಂಸ್ಥೆಯ ಪ್ರಾಮಾಣಿಕ ಸೇವೆಗೆ ಸಾಕ್ಷಿ ಎಂದರು.


ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಮಾತನಾಡಿ, ಪ್ರಾಚೀನ ಆಯುರ್ವೇದ ಜ್ಞಾನವನ್ನು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಬದ್ಧತೆಯಿಂದ ಜನರಿಗೆ ತಲುಪಿಸುತ್ತಿರುವ ಡಾ. ಬಾಯರಿ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿ ಅನುಪಮಾ ಎಸ್‌. ಶೆಟ್ಟಿ ಮಾತನಾಡಿ, ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಬದಲಾವಣೆಗಳಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಅದಕ್ಕೆ ನೈಸರ್ಗಿಕ ಜೀವನ ಕ್ರಮ ಮತ್ತು ಪ್ರಾಚೀನ ಆಯುರ್ವೇದವೇ ಪರಿಹಾರ. ಮಕ್ಕಳಲ್ಲಿ ಮತ್ತು ಸಮುದಾಯದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಇಂಥ ಆಯುರ್ವೇದ ಹಬ್ಬಗಳು ಸತತವಾಗಿ ನಡೆಯಬೇಕು ಎಂದು ಆಶಿಸಿದರು.


ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಸ್.ಕೃಷ್ಣಾನಂದ ಚಾತ್ರ ಮಾತನಾಡಿ, ಹೆಚ್ಚಿನ ವೈದ್ಯರು ವಿದೇಶ ಅಥವಾ ಮಹಾನಗರಗಳತ್ತ ಮುಖ ಮಾಡುವ ಈ ಕಾಲದಲ್ಲಿ, ಹಳ್ಳಿಯಲ್ಲೇ ಉಳಿದು ಇಡೀ ಸಮುದಾಯವನ್ನು ಒಗ್ಗೂಡಿಸಿಕೊಂಡು ಸಾಗುತ್ತಿರುವ ಬಾಯರಿ ದಂಪತಿ ಹೊಂದಿರುವ ತಮ್ಮೂರಿನ ಮೇಲಿನ ಪ್ರೀತಿ ಹಾಗೂ ಸಮಾಜಮುಖಿ ಕಳಕಳಿ ಅನುಕರಣೀಯ ಎಂದರು.


ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ.ರಾಜೇಶ್ ಬಾಯರಿ ಮಾತನಾಡಿ, ಮುಂದಿನ ಪರಂಪರೆಗೆ ಆಯುರ್ವೇದ ದಾಟಿಸುವುದು ಬಹಳ ಅಗತ್ಯ. ಆ ನಿಟ್ಟಿನಲ್ಲಿ ಇಂಥದ್ದೊಂದು ಆಲೋಚನೆ ಮಾಡಿದ್ದೇವೆ. ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ ಎಂದರು.


ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ರಮೇಶ್ ವೈದ್ಯ, ಮಹಾಬಲ ಬಾಯರಿ, ಕಲಾವತಿ ಬಾಯರಿ, ಡಾ. ಅನುಲೇಖಾ ಬಾಯರಿ ಇದ್ದರು.