ನಾಡೋಜ ಡಾ.ಜಿ.ಶಂಕರ್ 71ನೇ ಹುಟ್ಟುಹಬ್ಬ: ಅನಾರೋಗ್ಯ ಪೀಡಿತರು, ಹಿರಿಯ ಕಲಾವಿದರು, ರುದ್ರಭೂಮಿ ನೌಕರರಿಗೆ ನೆರವು

ಲೋಕಬಂಧು ನ್ಯೂಸ್ | ಉಡುಪಿ
ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳ ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ, ವಿಶೇಷ ಶಾಲೆಗಳು, ಹಿರಿಯ ಹಾಗೂ ನುರಿತ ಯಕ್ಷಗಾನ ಕಲಾವಿದರು, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವ ಸಂಸ್ಕಾರ ಕಾರ್ಯದಲ್ಲಿ ತೊಡಗಿರುವವರಿಗೆ ಸಹಾಯಧನ ವಿತರಿಸಲಾಯಿತು.
ಕೆಎಂಸಿ ಮಣಿಪಾಲ 145 ಕ್ಯಾನ್ಸರ್ ರೋಗಿಗಳು ಹಾಗೂ 28 ಕಿಡ್ನಿ ರೋಗಿ ಮತ್ತು ಹೃದ್ರೋಗಿಗಳು, ಕೆಎಂಸಿ ಅತ್ತಾವರ ಮಂಗಳೂರು 53 ಕ್ಯಾನ್ಸರ್ ಮತ್ತು 46 ಕಿಡ್ನಿ, ಕೆಎಂಸಿ ಮಂಗಳೂರು ಜ್ಯೋತಿ ವೃತ್ತ 17 ಕ್ಯಾನ್ಸರ್ ಮತ್ತು 50 ಕಿಡ್ನಿ, ಫಾದರ್ ಮುಲ್ಲರ್ ಮಂಗಳೂರು 76 ಕ್ಯಾನ್ಸರ್ ಮತ್ತು 19 ಕಿಡ್ನಿ, ವೆನ್ಲಾಕ್ ಆಸ್ಪತ್ರೆ ಮಂಗಳೂರು 45 ಕ್ಯಾನ್ಸರ್ ಮತ್ತು 35 ಕಿಡ್ನಿ, ಎಂಐಓ ಮಂಗಳೂರು 24 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಮಂಗಳೂರು 11 ಕ್ಯಾನ್ಸರ್ ಮತ್ತು 2 ಕಿಡ್ನಿ, ಆದರ್ಶ ಆಸ್ಪತ್ರೆ ಉಡುಪಿ 17 ಕ್ಯಾನ್ಸರ್ ಮತ್ತು 29 ಕಿಡ್ನಿ, ಗಾಂಧಿ ಆಸ್ಪತ್ರೆ ಉಡುಪಿ 6 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಕುಂದಾಪುರ 11 ಕ್ಯಾನ್ಸರ್ ಮತ್ತು 5 ಕಿಡ್ನಿ, ಸರಕಾರಿ ಆಸ್ಪತ್ರೆ ಬ್ರಹ್ಮಾವರ 10 ಕಿಡ್ನಿ ಹಾಗೂ ಇತರ 7 ಕ್ಯಾನ್ಸರ್ ಪೀಡಿತರು ಸೇರಿದಂತೆ ಒಟ್ಟು 412 ಕ್ಯಾನ್ಸರ್ ರೋಗಿಗಳು ಹಾಗೂ 224 ಕಿಡ್ನಿ ಸಮಸ್ಯೆ ಬಾಧಿತರಿಗೆ ನೆರವು ನೀಡಲಾಯಿತು.


ಉಭಯ ಜಿಲ್ಲೆಗಳ 89 ಹಿರಿಯ ಯಕ್ಷಗಾನ ಕಲಾವಿದರು, ಉಭಯ ಜಿಲ್ಲೆಗಳ 31_ವಿಶೇಷ ಶಾಲೆ ಹಾಗೂ ರುದ್ರಭೂಮಿಯಲ್ಲಿ ಶವ ಸಂಸ್ಕಾರದಲ್ಲಿ ತೊಡಗಿರುವವರಿಗೆ ಸಹಾಯಹಸ್ತ ಚಾಚಲಾಗಿದ್ದು ಕ್ಯಾನ್ಸರ್, ಕಿಡ್ನಿ, ವಿಶೇಷ ಶಾಲೆ ಹಾಗೂ ರುದ್ರಭೂಮಿ ನೌಕರರಿಗೆ ತಲಾ 25 ಸಾವಿರದಂತೆ ಹಾಗೂ ಯಕ್ಷಗಾನ ಕಲಾವಿದರಿಗೆ ತಲಾ 10 ಸಾವಿರದಂತೆ ಅವರವರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನೇರ ಜಮೆ ಮಾಡಲಾಗಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.