ಲೋಕಬಂಧು ನ್ಯೂಸ್ | ಉಡುಪಿ
ರಾಜ್ಯ ಅರಣ್ಯ ಇಲಾಖೆಯ 2 ಕೋಟಿ ರೂ. ಅನುದಾನದಲ್ಲಿ ಬ್ರಹ್ಮಾವರ ಸಮೀಪದ ನೀಲಾವರದಲ್ಲಿ ನಿರ್ಮಿಸಲಾಗಿರುವ ಪದ್ಮವಿಭೂಷಣ ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ಮೃತಿವನವನ್ನು ಗುರುವಾರ ಅಧಿಕೃತವಾಗಿ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಬಜೆಟ್‌ನಲ್ಲಿ ಸ್ಮೃತಿವನ ನಿರ್ಮಾಣ ಘೋಷಿಸಿ, 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು.
ವಿವಿಧ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬಗೊಂಡಿದ್ದು, ಪೂರ್ಣಗೊಂಡ ಬಳಿಕ ಅಂದಿನ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಮೇ ತಿಂಗಳಲ್ಲಿ ಸ್ಮೃತಿವನ ಉದ್ಘಾಟಿಸಿದ್ದರು.
ಉಡುಪಿ ನಿರ್ಮಿತಿ ಕೇಂದ್ರ ಸ್ಮೃತಿವನದ ನಿರ್ಮಾಣ ಕಾಮಗಾರಿ ಕೈಗೊಂಡಿತ್ತು. ಇದೀಗ ಅರಣ್ಯ ಇಲಾಖೆ ಅಗತ್ಯ ದಾಖಲಾತಿ ಹಾಗೂ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಪೇಜಾವರ ಮಠಕ್ಕೆ ಒಪ್ಪಿಸಿತು.
ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಹಾಗೂ ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಮೂಲಕ ಮಠಕ್ಕೆ ಹಸ್ತಾಂತರಿಸಿದರು.
ಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಹಾಗೂ ಸ್ಮೃತಿವನ ನಿರ್ಮಾಣದ ಉಸ್ತುವಾರಿ ಪವನ್ ಪೆರುಮುಂಡ ಇದ್ದರು.
