ಜ್ಞಾನಜ್ಯೋತಿ ಶ್ರೀಮದಭಿನವವಿದ್ಯಾತೀರ್ಥ ಮಹಾಸ್ವಾಮಿಗಳು

ಜ್ಞಾನಜ್ಯೋತಿ ಶ್ರೀಮದಭಿನವವಿದ್ಯಾತೀರ್ಥ ಮಹಾಸ್ವಾಮಿಗಳು 
ಶೃಂಗೇರಿ ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳಾದ ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಆರಾಧನೆ ಅಕ್ಟೋಬರ್ 3ರಂದು (ಪರಾಭವ  ನಾಮ  ಸಂವತ್ಸರದ ಭಾದ್ರಪದ ಮಾಸ ಕೃಷ್ಣಪಕ್ಷದ ಸಪ್ತಮಿ) ನಡೆಯಲಿದ್ದು, ಈ ಸದವಸರದಲ್ಲಿ ಜಗದ್ಗುರು ಮಹಾಸ್ವಾಮಿಗಳವರ ಪುಣ್ಯಸ್ಮರಣೆ.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳಾಗಿ, ಅದ್ವೈತ ವೇದಾಂತದ ಮಹಾನ್ ಆಚಾರ್ಯರಾಗಿ, ಜ್ಞಾನಿಗಳಾಗಿ ಪ್ರಸಿದ್ಧರಾದವರು ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು.


ಅವರು 1917ರ ನವೆಂಬರ್ 13ರಂದು (ಪಿಂಗಳ ನಾಮ ಸಂವತ್ಸರದ  ಆಶ್ವಯುಜ  ಬಹುಳ ಚತುರ್ದಶಿ) ದೀಪಾವಳಿಯ ನರಕ ಚತುರ್ದಶಿ ಶುಭದಿನ ಬೆಂಗಳೂರಿನಲ್ಲಿ ಶ್ರೀ ರಾಮಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಿ ಅಮ್ಮನವರ ದಂಪತಿಗಳ ಸುಪುತ್ರರಾಗಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಶ್ರೀನಿವಾಸ. ಅವರ ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಬಾಲ್ಯದಿಂದಲೇ ಶ್ರೀನಿವಾಸ ಅವರು ಅತ್ಯಂತ ಶಾಂತ, ಭಕ್ತಿಪರ, ವಿನಯಶೀಲ ಹಾಗೂ ವಿಚಾರಶೀಲ ಸ್ವಭಾವ ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬೇಕು, ಸಂಸಾರವನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಬೇಕು ಎಂಬ ಮಹದಾಸೆ ಇತ್ತು.


ಶ್ರೀನಿವಾಸ ಅವರ ಅಸಾಧಾರಣ ಪ್ರತಿಭೆ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಗಮನಿಸಿದವರು ಶೃಂಗೇರಿ ಪೀಠದ 34ನೇ ಜಗದ್ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. ಶ್ರೀನಿವಾಸ ಅವರು ಶೃಂಗೇರಿಯಲ್ಲಿ ವೇದ, ಶಾಸ್ತ್ರ ಮತ್ತು ಸಂಸ್ಕೃತ ವಿದ್ಯಾಭ್ಯಾಸ ಮುಂದುವರಿಸಿದರು. ಶ್ರೀ ಶಾರದಾಂಬಾ ದೇವಾಲಯದಲ್ಲಿ ಅವರ ಉಪನಯನ ಸಂಸ್ಕಾರವೂ ನಡೆಯಿತು. ವಿದ್ಯಾಭ್ಯಾಸದ ಜೊತೆಗೆ ಗುರುಸೇವೆ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿಯೂ ಅವರು ತೊಡಗಿಸಿಕೊಂಡರು.


ಶ್ರೀನಿವಾಸರ ಅಪೂರ್ವ ಬುದ್ಧಿಶಕ್ತಿ, ವೈರಾಗ್ಯ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಕಂಡ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು.


1931ರ ಮೇ 22ರಂದು (ಪ್ರಜೋತ್ಪತ್ತಿ ನಾಮ ಸಂವತ್ಸರದ ಜೇಷ್ಠ ಮಾಸದ ಶುದ್ಧ ಪಂಚಮಿ) ಕೇವಲ ಹದಿಮೂರು ವರ್ಷ ವಯಸ್ಸಿನ ಶ್ರೀನಿವಾಸ ಅವರು ಸನ್ಯಾಸಾಶ್ರಮ ಸ್ವೀಕರಿಸಿದರು. ಅವರಿಗೆ ಶ್ರೀ ಅಭಿನವ ವಿದ್ಯಾತೀರ್ಥ  ಎಂಬ ಯೋಗಪಟ್ಟ ನೀಡಲಾಯಿತು. ಬಾಲಕ ಶ್ರೀನಿವಾಸ ಅವರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಾಗಿ ಶ್ರೀ ಶಾರದಾ ಪೀಠದ ಪರಂಪರೆಯನ್ನು ಪ್ರವೇಶಿಸಿದರು.


ಸನ್ಯಾಸ ಸ್ವೀಕಾರದ ನಂತರ ಅವರ ಜೀವನ ಸಂಪೂರ್ಣವಾಗಿ ಗುರುಸೇವೆ, ಶಾಸ್ತ್ರಾಧ್ಯಯನ, ಧ್ಯಾನ, ಮತ್ತು ಆತ್ಮಸಾಕ್ಷಾತ್ಕಾರದ ಸಾಧನೆಗೆ ಸಮರ್ಪಿತವಾಯಿತು. ಗುರುಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಅವರಿಗೆ ಧ್ಯಾನ ಮತ್ತು ಆತ್ಮವಿಚಾರದ ಮಾರ್ಗವನ್ನು ಬೋಧಿಸಿದರು. ಕೇವಲ 15- 16 ವರ್ಷ ವಯಸ್ಸಿನಲ್ಲಿಯೇ ಅವರು ಆಳವಾದ ಧ್ಯಾನದಲ್ಲಿ ತಲ್ಲೀನರಾಗತೊಡಗಿದರು.


ಗುರುಭಕ್ತಿಗೆ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನವಿತ್ತು. ತಮ್ಮ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳವರನ್ನು ಅವರು ಪರಮಭಕ್ತಿಯಿಂದ ಸೇವಿಸಿದರು. ಗುರುಗಳ ಆಜ್ಞೆಯನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಪಾಲಿಸಬೇಕು ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಗುರು- ಶಿಷ್ಯ ಸಂಬಂಧದ ಅಪೂರ್ವ ಮಾದರಿಯಾಗಿ ಅವರ ಜೀವನ ಇಂದಿಗೂ ಸ್ಮರಿಸಲ್ಪಡುತ್ತದೆ. 


ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು 1954ರ ಸೆಪ್ಟೆಂಬರ್ 26 (ಜಯ ನಾಮ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆ)ರಂದು ಮಹಾಸಮಾಧಿ ಹೊಂದಿದ ನಂತರ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಶೃಂಗೇರಿ ಶ್ರೀ ಶಾರದಾ ಪೀಠದ ಜವಾಬ್ದಾರಿಯನ್ನು ಸ್ವೀಕರಿಸಿದರು. 1954ರ ಅಕ್ಟೋಬರ್ 16 (ಜಯ ಸಂವತ್ಸರದ ಆಶ್ವಯುಜ ಬಹುಳ ಪಂಚಮಿ)ರಂದು ಅವರು 35ನೇ ಜಗದ್ಗುರು ಶಂಕರಾಚಾರ್ಯರಾಗಿ ಪೀಠಾರೋಹಣ ಮಾಡಿದರು.


ಶೃಂಗೇರಿಯ ಪೀಠಾಧಿಪತ್ಯ ಸ್ವೀಕರಿಸಿದ ನಂತರ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಜೀವನವು ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಸಮಾಜ ಮತ್ತು ಧರ್ಮದ ಸೇವೆಗೆ ಸಮರ್ಪಿತವಾಯಿತು.
ಅವರು ಭಾರತದ ವಿವಿಧ ಭಾಗಗಳಿಗೆ ವ್ಯಾಪಕವಾಗಿ ವಿಜಯಯಾತ್ರೆಗಳನ್ನು ಕೈಗೊಂಡರು. 1956ರಲ್ಲಿ ಶ್ರೀಕ್ಷೇತ್ರ ಅಶ್ವತ್ಥಪುರದಿಂದ ಆರಂಭವಾದ ಅವರ ಮೊದಲ ಪ್ರಮುಖ ಯಾತ್ರೆಯಲ್ಲಿ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರವಾಸ ಮಾಡಿದರು.


1964ರಿಂದ ಮತ್ತೊಂದು ದೀರ್ಘ ಯಾತ್ರೆ ಕೈಗೊಂಡು ದಕ್ಷಿಣ ಮತ್ತು ಉತ್ತರ ಭಾರತವನ್ನು ಸಂದರ್ಶಿಸಿದರು. ಅವರ ಪ್ರವಾಸಗಳ ಉದ್ದೇಶ ಕೇವಲ ಭಕ್ತರಿಗೆ ದರ್ಶನ ನೀಡುವುದಲ್ಲ. ವೇದಧರ್ಮ, ಸನಾತನ ಧರ್ಮ, ಸಂಸ್ಕೃತ, ಶಾಸ್ತ್ರಾಧ್ಯಯನ ಮತ್ತು ಧಾರ್ಮಿಕ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿತ್ತು.


ಅವರು ಅನೇಕ ಸ್ಥಳಗಳಲ್ಲಿ ಶ್ರೀಶಾರದಾಂಬಾ ಮತ್ತು ಶ್ರೀ ಶಂಕರಾಚಾರ್ಯರ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿಸಿದರು. ವೇದಪಾಠಶಾಲೆಗಳು, ಸಂಸ್ಕೃತ ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಬೆಂಗಳೂರಿನಲ್ಲಿ ವೇದಪಾಠಶಾಲೆಯ ಅಭಿವೃದ್ಧಿಗೆ ಮತ್ತು ಶೃಂಗೇರಿಯ ಪಾಠಶಾಲೆಗಳ ವಿಸ್ತರಣೆಗೆ ವಿಶೇಷ ಗಮನ ನೀಡಿದರು. ಸಂಸ್ಕೃತದ ಪ್ರಸಾರಕ್ಕಾಗಿ ಸುರಸರಸ್ವತಿ ಸಭಾದಂಥ ಸಂಸ್ಥೆಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಿದರು.


ಶೃಂಗೇರಿಯ ಅಭಿವೃದ್ಧಿಗೆ ಕೊಡುಗೆ
ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಆಧ್ಯಾತ್ಮಿಕ ಮಹಾನ್ ಗುರುಗಳಷ್ಟೇ ಅಲ್ಲದೆ, ದೂರದೃಷ್ಟಿಯ ಆಡಳಿತಗಾರರೂ ಆಗಿದ್ದರು. ಅವರ ಕಾಲದಲ್ಲಿ ಶೃಂಗೇರಿ ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನೇಕ ಕಾರ್ಯಗಳು ನಡೆದವು. ಯಾತ್ರಿಕರಿಗಾಗಿ ವಸತಿ ವ್ಯವಸ್ಥೆ, ದೇವಾಲಯಗಳ ಅಭಿವೃದ್ಧಿ, ರಸ್ತೆ ಮತ್ತು ನೀರಾವರಿ ಸೌಲಭ್ಯಗಳು ಮುಂತಾದ ಕಾರ್ಯಗಳಿಗೆ ಅವರು ಮಾರ್ಗದರ್ಶನ ನೀಡಿದರು.


ತುಂಗಾ ನದಿಗೆ ಸೇತುವೆ ನಿರ್ಮಿಸುವ ಕಾರ್ಯವೂ ಅವರ ಕಾಲದಲ್ಲಿ ಆರಂಭವಾಯಿತು. ಇಂದು ಅದು 'ವಿದ್ಯಾತೀರ್ಥ ಸೇತುವೆ' ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.


ಶೃಂಗೇರಿಯಲ್ಲಿ ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆ ಸ್ಥಾಪನೆಗೂ ಅವರ ಕಾಲದಲ್ಲಿ ಉತ್ತೇಜನ ದೊರೆಯಿತು. ಇಂದು ಅದು ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ  ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ.


ಶಿಕ್ಷಣ ಕ್ಷೇತ್ರದಲ್ಲಿಯೂ ಅವರು ವಿಶೇಷ ಆಸಕ್ತಿ ವಹಿಸಿ ಜ್ಞಾನೋದಯ ಶಾಲೆಯನ್ನು ಸ್ಥಾಪಿಸಿ 1988ರಲ್ಲಿ ಉದ್ಘಾಟಿಸಿದರು.


ಅವರ ವಿಜಯಯಾತ್ರೆಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ವಿಸ್ತರಿಸಿದ್ದವು. ನೇಪಾಳಕ್ಕೂ ಭೇಟಿ ನೀಡಿದ ಅವರು, ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ನಂತರ ನೇಪಾಳಕ್ಕೆ ಭೇಟಿ ನೀಡಿದ ಪ್ರಮುಖ ಆಮ್ನಾಯ ಪೀಠಾಧಿಪತಿಗಳಲ್ಲಿ ವಿಶಿಷ್ಟ ಸ್ಥಾನ ಪಡೆದರು. ನೇಪಾಳದಲ್ಲಿ 1967ರಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದರು.


ಅವರು ಎಲ್ಲೆಡೆ ಜನರಿಗೆ ಧರ್ಮಾಚರಣೆ, ಗುರುಭಕ್ತಿ, ವೇದಾಧ್ಯಯನ, ಆತ್ಮವಿಚಾರ, ಭಕ್ತಿ ಮತ್ತು ಸತ್ಕರ್ಮಗಳ ಮಹತ್ವವನ್ನು ಬೋಧಿಸಿದರು. ಅವರ ದೃಷ್ಟಿಯಲ್ಲಿ ಧರ್ಮ ಕೇವಲ ಆಚರಣೆಗಳ ಸಮೂಹವಾಗಿರಲಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಸತ್ಯ, ಸಂಯಮ, ಕರುಣೆ, ಕರ್ತವ್ಯನಿಷ್ಠೆ ಮತ್ತು ಆತ್ಮವಿಚಾರವನ್ನು ಅಳವಡಿಸಿಕೊಳ್ಳುವುದು ಧರ್ಮದ ಸಾರ ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ತೋರಿಸಿದರು.


ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನೂ ಮುಂಚಿತವಾಗಿಯೇ ಆಯ್ಕೆ ಮಾಡಿದ್ದರು. 1974ರಲ್ಲಿ ಶ್ರೀ ಸೀತಾರಾಮ ಅಂಜನೇಯಲು ಎಂಬ ಬ್ರಹ್ಮಚಾರಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಸ್ವೀಕರಿಸಿ, ಅವರಿಗೆ 'ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು' ಎಂಬ ಯೋಗಪಟ್ಟವನ್ನು ನೀಡಿ ಶೃಂಗೇರಿ ಪೀಠದ ಆಚಾರ್ಯ ಪರಂಪರೆಗೆ ಸುಸಜ್ಜಿತವಾದ ವ್ಯವಸ್ಥೆ ಮಾಡಿದರು.


1989ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಶೃಂಗೇರಿಯಲ್ಲಿಯೇ ಚಾತುರ್ಮಾಸ್ಯವನ್ನು ಆಚರಿಸಿದರು. ಸೆಪ್ಟೆಂಬರ್ 15ರಂದು ಚಾತುರ್ಮಾಸ್ಯ ಪೂರ್ಣಗೊಂಡ ನಂತರ ಅವರು  ಶ್ರೀ ಶಾರದಾಂಬಾ ದೇವಿಯ ದರ್ಶನ ಪಡೆದರು. ಅಂತಿಮ ದಿನಗಳಲ್ಲಿಯೂ ತಮ್ಮ ದೈನಂದಿನ ಆಧ್ಯಾತ್ಮಿಕ ಚಟುವಟಿಕೆಗಳನ್ನು ಅವರು ಮುಂದುವರಿಸಿದರು.


ದೇಹದಲ್ಲಿ ನೋವು ಇದ್ದರೂ ಭಗವಂತನ ನಾಮಸ್ಮರಣೆಯಲ್ಲಿ ನಿರತರಾಗಿದ್ದರು.  1989ರ ಸೆಪ್ಟೆಂಬರ್ 21 (ಶುಕ್ಲ ನಾಮ ಸಂವತ್ಸರದ ಭಾದ್ರಪದ ಬಹುಳ ಸಪ್ತಮಿ)ರಂದು ಶೃಂಗೇರಿಯಲ್ಲಿ ಅವರು ಮಹಾಸಮಾಧಿಯನ್ನು ಹೊಂದಿದರು. ಅವರ ಪವಿತ್ರ ಅಧಿಷ್ಠಾನವು ಶೃಂಗೇರಿಯ ನರಸಿಂಹವನದಲ್ಲಿದೆ.


ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಜೀವನ ಜ್ಞಾನ, ಯೋಗ, ಭಕ್ತಿ, ಗುರುಸೇವೆ, ಧರ್ಮಪ್ರಚಾರ ಮತ್ತು ಸಮಾಜಸೇವೆಯ ಅಪೂರ್ವ ಸಮನ್ವಯವಾಗಿದೆ.


ಶೃಂಗೇರಿ ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳಾಗಿ 1954ರಿಂದ 1989ರ ವರೆಗೆ ಶ್ರೀ ಶಾರದಾ ಪೀಠವನ್ನು ಮುನ್ನಡೆಸಿದರು. ಅವರ ಜೀವನವನ್ನಾಧರಿಸಿ ಹಲವು ಕೃತಿಗಳು ಪ್ರಕಟವಾಗಿವೆ. ಅವರ ಆಧ್ಯಾತ್ಮಿಕ ಸಾಧನೆ, ಮತ್ತು ಉಪದೇಶಗಳನ್ನು ದಾಖಲಿಸುವ ಗ್ರಂಥಗಳು ಇಂದಿಗೂ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿವೆ.


ಗುರುವಿನಲ್ಲಿ ಅಚಲ ಭಕ್ತಿ, ಶಾಸ್ತ್ರದಲ್ಲಿ ಆಳವಾದ ನಿಷ್ಠೆ, ಸಾಧನೆಯಲ್ಲಿ ನಿರಂತರತೆ, ಎಲ್ಲ ಜೀವಿಗಳಲ್ಲಿಯೂ ಕರುಣೆ ಮತ್ತು ಆತ್ಮಜ್ಞಾನದ ಕಡೆಗೆ ಅಚಲವಾದ ಪ್ರಯತ್ನ ಇವು ಜಗದ್ಗುರು ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಜೀವನ ನಮಗೆ ನೀಡುವ ಮುಖ್ಯ ಸಂದೇಶ.


ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ದೇಹದಿಂದ ನಮ್ಮ ನಡುವೆ ಇಲ್ಲದಿದ್ದರೂ, ಅವರ ಜ್ಞಾನ, ತಪಸ್ಸು, ಉಪದೇಶ ಮತ್ತು ಗುರುಪರಂಪರೆಯ ಮೂಲಕ ಇಂದಿಗೂ ಭಕ್ತರ ಹೃದಯಗಳಲ್ಲಿ ಜೀವಂತವಾಗಿದ್ದಾರೆ. ಶೃಂಗೇರಿಯ ನರಸಿಂಹವನದಲ್ಲಿರುವ ಅವರ ಅಧಿಷ್ಠಾನ ಭಕ್ತರಿಗೆ ಪವಿತ್ರ ಸ್ಮರಣೆಯ ಕ್ಷೇತ್ರವಾಗಿದೆ.