ಉತ್ತಮ ವ್ಯಕ್ತಿತ್ವಕ್ಕೆ ಭಜನೆ ಪೂರಕ

ಲೋಕಬಂಧು ನ್ಯೂಸ್ | ಉಜಿರೆ
ಭಜನೆ ಮತ್ತು ನೈತಿಕತೆ ಆಳವಾಗಿ ಬೆರೆತುಕೊಂಡಿದ್ದು, ನೀತಿಯುತವಾದ ನಾಯಕತ್ವ ಬೆಳೆಸಿಕೊಳ್ಳುವಲ್ಲಿ ಭಜನೆ ಪೂರಕ. ಭಜನೆಯಿಂದ ನಮ್ಮ ಆಂತರಿಕ ಗುಣಲಕ್ಷಣಗಳು ಪರಿವರ್ತನೆಯಾಗಿ ಉತ್ತಮ ವ್ಯಕ್ತಿತ್ವವನ್ನು ‌ ರೂಪಿಸಿಕೊಳ್ಳಲು ಸಹಕಾರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್. ಕೆ.ಡಿ.ಆರ್.ಡಿ.ಪಿ.)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.3ರಂದು ಶನಿವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಆರನೇ ದಿನದ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಮ್ಮ ಯಾವುದೇ ಕಾರ್ಯವನ್ನು ಅತಿಯಾದ ಶ್ರದ್ದೆಯಿಂದ ಕೈಗೊಂಡಾಗ ಮಾತ್ರ ಆ ಕಾರ್ಯದ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ. ಪ್ರತಿಯೊಬ್ಬ ಭಜಕನೂ ಯಾವುದೇ ರೀತಿಯ ದುರಭ್ಯಾಸಗಳಿಗೆ ಬಲಿಯಾಗದೆ ಮಾದರಿ ತತ್ವವನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಓರ್ವ ಆದರ್ಶ ನಾಯಕನಾಗಿ ಮೂಡಿಬರಬೇಕಾಗಿದೆ.  ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಭಾಗಿಯಾಗುವುದರಿಂದ ಕುಟುಂಬದಲ್ಲಿ ಪ್ರೀತಿ, ಸೌಹಾರ್ದತೆ, ಐಕ್ಯತೆ ಹಾಗೂ ಒಗ್ಗಟ್ಟನ್ನು  ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ನಾವು ಮುನ್ನಡೆಯಬೇಕು ಎಂದರು.


ಆಧುನಿಕತೆಯ ಜೀವನ ಶೈಲಿಯಲ್ಲಿ ಸಾರ್ಥಕ ಬದುಕು ಅಸಾಧ್ಯವಾಗಿದ್ದು, ಪೂರ್ವಕಾಲದ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಜನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕನ್ನು ಸಾಧ್ಯವಾಗಿಸಬಹುದು ಎಂದು ಶಿಬಿರಾರ್ಥಿಗಳಿಗೆ ಬೋಧಿಸಿದರು.


ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ಚಿಂತನೆಯಿಂದ ಹೊರಬಂದ ಗ್ರಾಮೀಣ ಅಭಿವೃದ್ಧಿ ಯೋಜನೆ ಇಂದು ಕರ್ನಾಟಕದ ಸಾವಿರಾರು ಜನರ ಬದುಕಿಗೆ ನೆರಳಾಗಿ ನಿಂತಿದೆ. ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಆರ್ಥಿಕ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಸಾವಿರಾರು ಯೋಜನೆಗಳು ಇಡೀ  ದೇಶಕ್ಕೆ ಮಾದರಿಯಾಗಿ ನಿಂತಿದೆ ಎಂದರು.


ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್,‌ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಕ್ಷೇತ್ರ ಧರ್ಮಸ್ಥಳದ ಹಿರಿಯ ಮುತ್ಸದ್ಧಿ ಭುಜಬಲಿ, ಭಜನಾ ಕಮ್ಮಟ ಪರಿಷತ್ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮೊದಲಾದವರಿದ್ದರು.