ಲೋಕಬಂಧು ನ್ಯೂಸ್ | ಉಜಿರೆ
ಯಾವುದೇ ಮತ- ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯ ಸಾರುವ ಕಾರ್ಯವನ್ನು ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತ, ಅರ್ಥದಾರಿ ಹಾಗೂ ಕಲ್ಮಾಡಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶುಕ್ರವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನದ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದು.
ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದರು.
ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಿಂದಿನ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗಿಯಾಗಿ ಸಾರ್ಥಕತೆಯನ್ನು ಕಂಡ ಹೇಮಂತ್ ಸುಳ್ಯ ಅನುಭವ ಹಂಚಿಕೊಂಡರು.
ಸಂಗೀತ ವಿದುಷಿ ಉಷಾ ಹೆಬ್ಬಾರ್, ಭಜನಾ ಕಮ್ಮಟ ಸಮಿತಿ ಸಂಚಾಲಕ ಸುಬ್ರಮಣ್ಯ ಪ್ರಸಾದ್, ಸಮಿತಿ ಸದಸ್ಯರು ಮೊದಲಾದವರಿದ್ದರು.
.jpg)
.jpg)