ಮಾರ್ಪಾಡುಗೊಳಿಸಿದ ಶಸ್ತ್ರಾಸ್ತ್ರ ವಶ

ಲೋಕಬಂಧು ನ್ಯೂಸ್ ಉಡುಪಿ
ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ದುರುಪಯೋಗಕ್ಕೆ ತಡೆಯೊಡ್ಡಲು ಉಡುಪಿ ಜಿಲ್ಲಾ ಪೊಲೀಸರು ಕೈಗೊಂಡಿದ್ದ ಬೃಹತ್ ವಿಶೇಷ ತಪಾಸಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅನಧಿಕೃತವಾಗಿ ಮಾರ್ಪಾಡು ಮಾಡಲಾಗಿದ್ದ 4 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಸಂಬಂಧಿಸಿದಂತೆ ದೂರುಗಳ ಹಿನ್ನೆಲೆಯಲ್ಲಿ, ಎಸ್.ಪಿ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.


ಗನ್ ಲೈಸೆನ್ಸ್ ಹೊಂದಿರುವವರ ಹಿನ್ನೆಲೆ, ಶಸ್ತ್ರಾಸ್ತ್ರಗಳ ಪ್ರಸ್ತುತ ಸ್ಥಿತಿ ಹಾಗೂ ಅವುಗಳಲ್ಲಿ ಏನಾದರೂ ಮಾರ್ಪಾಡು ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ಸತತ ಒಂದು ತಿಂಗಳ ಕಾಲ ಜಾಲಾಡಿದ್ದರು.


ಕಾರ್ಯಾಚರಣೆ ವೇಳೆ ಜಿಲ್ಲಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಖುದ್ದು ತಪಾಸಣೆಗೊಳಪಡಿಸಲಾಗಿದೆ.

ನಾಲ್ಕು ಠಾಣೆಗಳಲ್ಲಿ ಕೇಸ್ ದಾಖಲು
ತಪಾಸಣೆ ವೇಳೆ 4 ಶಸ್ತ್ರಾಸ್ತ್ರಗಳನ್ನು ನಿಯಮಬಾಹಿರವಾಗಿ ಮಾರ್ಪಾಡು ಮಾಡಿರುವುದು ಕಂಡುಬಂದಿದೆ. ಈ ಸಂಬಂಧ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗಿದೆ.