ನಕಲಿ ಕ್ಯೂಆರ್ ಕೋಡ್ ಬಳಸಿ ವಂಚನೆ

ಲೋಕಬಂಧು ನ್ಯೂಸ್ ಮಣಿಪಾಲ
ಇಲ್ಲಿನ ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬ್ಯಾಟರಿ ಚಾಲಿತ ವಾಹನ ಸೇವೆ ಮಾಡುವ ಇಂಡಿಯಾಂಟಾ ಇ ಮೊಬಿಲಿಟಿ ಕಂಪನಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದ ಮೂರ್ತಿ ಜಿ. (29), ಉಡುಪಿ ಆತ್ರಾಡಿಯ ಶಿವರಾಜ್ ನಾಯ್ಕ (30), ಚಿತ್ರದುರ್ಗದ ಸುದೀಪ್ (30), ಮಂಜೇಶ್ವರದ ಜಿತೇಶ ಕಾಂಚನ್ (29), ಬೆಳಗಾವಿಯ ಮುತ್ತಣ್ಣ ಅಧೀನವರ (32) ಮತ್ತು ದ.ಕ. ಜಿಲ್ಲೆಯ ಬೆಳ್ತಂಗಡಿ ನಾವೂರಿನ ಎಂ.ಬಿ.ಅವಿನಾಶ್ (24) ಬಂಧಿತ ಆರೋಪಿಗಳು.
ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಏ.1ರಿಂದ ಕಂಪನಿಗೆ ಬರಬೇಕಾದ ಪ್ರಯಾಣಿಕರ ಶುಲ್ಕವನ್ನು ನೀಡದೇ ಕಂಪನಿಯ ಕ್ಯೂರ್ ಕೋಡ್ ಬಳಸದೇ ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಕರ ಶುಲ್ಕ ಸಂಗ್ರಹಿಸಿದ್ದರು.


ಹೀಗೆ ಅವರು ಕಂಪನಿಗೆ ಬರಬೇಕಾದ 12 ಲಕ್ಷ ರೂ. ಹಣವನ್ನು ಮುತ್ತಣ್ಣ ಅದಿನವರ್ ಅವರ ಹೆಂಡತಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಿರುವುದಾಗಿ ದೂರಲಾಗಿದೆ.


ಆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅ.2ರಂದು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.