ಲೋಕಬಂಧು ನ್ಯೂಸ್ ಉಡುಪಿ
ಗಾಂಧೀಜಿಯವರ ತತ್ವ ಚಿಂತನೆಯ ಮೂಲ ಆಶಯವೆಂದರೆ ನಮ್ಮನ್ನು ಮತ್ತೊಬ್ಬರು ಆಳಬಾರದು ಮಾತ್ರವಲ್ಲದೆ, ನಾವು ಯಾರು ಎಂಬುದನ್ನು ನಾವೇ ಅರಿತುಕೊಳ್ಳಬೇಕು ಎಂಬುದಾಗಿದೆ ಎಂದು ಬಾರ್ಕೂರು ಎಸ್.ಆರ್.ಎಸ್.ಎಂ.ಎನ್. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸಾದ್ ರಾವ್ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಹಾಗೂ ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ 'ಕಾರಂತರ ಚಿಂತನೆಯಲ್ಲಿ ಗಾಂಧೀಜಿ' ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಉಪ್ಪಿನಂಥ ಮೂಲಭೂತ ವಸ್ತುವನ್ನೂ ತಯಾರಿಸುವ ಸ್ವಾತಂತ್ರ್ಯ ಇಲ್ಲದಿರುವುದು ಸ್ವಾತಂತ್ರ್ಯ ಹೀನತೆಯ ಸಂಕೇತ ಎಂಬ ಸಂದೇಶವನ್ನು ಗಾಂಧೀಜಿ ಸಾರಿದರು. ರೈತರು ಹಾಗೂ ಬಡವರ್ಗದ ಅಸಹಾಯಕ ಪರಿಸ್ಥಿತಿಯನ್ನು ಅವರು ತಮ್ಮ ಚಳವಳಿಯ ಮೂಲಕ ಜನಾಂದೋಲನದ ರೂಪಕ್ಕೆ ತಂದರು. 1909ರಲ್ಲಿ ಗಾಂಧೀಜಿ ಬರೆದ 'ಹಿಂದ್ ಸ್ವರಾಜ್' ಕೃತಿ ಅವರ ವೈಯಕ್ತಿಕ ಸಂವಿಧಾನದಂತಿದ್ದು, ಗಾಂಧೀಜಿ ಚಿಂತನೆ ಅರಿಯಲು ಅತ್ಯಂತ ಮಹತ್ವದ ಕೃತಿಯಾಗಿದೆ ಎಂದರು.
ಶಿವರಾಮ ಕಾರಂತರು ಗಾಂಧೀಜಿಯವರೊಂದಿಗೆ ಕೈಗಾರಿಕೀಕರಣದ ಕುರಿತ ಕೆಲವು ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದರೂ ಬ್ರಹ್ಮಚರ್ಯ, ತ್ಯಾಗ ಹಾಗೂ ಸರಳ ಜೀವನದಂಥ ಗಾಂಧೀಜಿ ಪರಿಕಲ್ಪನೆಗಳನ್ನು ವಿರೋಧಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ಇಂದು ಪ್ರಚಲಿತದಲ್ಲಿರುವ ಸ್ವದೇಶಿ ಚಳವಳಿ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಚಳವಳಿಗಳ ಮೂಲ ಪ್ರೇರಣೆ ಗಾಂಧೀಜಿಯವರ ತತ್ವ ಚಿಂತನೆಯಲ್ಲಿದೆ ಎಂದರು.
ಗಾಂಧೀಜಿಯವರನ್ನು ಸ್ಮರಿಸುವ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಕಡೆಗಣಿಸಲಾಗಿಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವತಃ ಗಾಂಧಿ ಶಿಷ್ಯ ಮತ್ತು ತಮ್ಮ ಬದುಕಿನಲ್ಲಿ ಗಾಂಧೀವಾದದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಅವರು, ಗಾಂಧೀಜಿಯವರ ಪ್ರಬಲ ಅಸ್ತ್ರಗಳಾದ ಸತ್ಯ ಮತ್ತು ಅಹಿಂಸೆ ಇಂದಿಗೂ ಪ್ರಸ್ತುತ.
ಗಾಂಧೀಜಿಯವರ ಸರಳ ಜೀವನ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಸಂಚಾಲಕ ಸತೀಶ್ ಕೊಡವೂರು, ಇಲಾಖೆ ಸಿಬಂದಿ ವರ್ಷಾ, ಪ್ರಾಧ್ಯಾಪಕರಾದ ಪ್ರೊ. ಪಿ.ಬಿ. ಪ್ರಸನ್ನ, ರೇಖಾ ಎಸ್.ಎನ್., ಜಯಲಿಂಗಮೂರ್ತಿ, ಸಚಿನ್ ಖೇಣಿಕರ್, ಡಾ.ರವೀಶ ಬಿ., ಪುರುಷೋತ್ತಮ, ಪುನೀತ್ ತೆಂಡೂಲ್ಕರ್, ಸಂತೋಷ್ ಪ್ರಭು ಎಂ., ಅಶ್ವಿಜಾ ಮೊದಲಾದವರಿದ್ದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ವಿದ್ಯಾರ್ಥಿನಿಯರು 'ರಘುಪತಿ ರಾಘವ ರಾಜಾರಾಮ್' ಹಾಗೂ 'ವೈಷ್ಣವ ಜನ ತೋ' ಗಾಯನ ಪ್ರಸ್ತುತಪಡಿಸಿದರು.
ಕಾಲೇಜಿನ ಎನ್ಎಸ್ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ ರೆಡ್ ಕ್ರಾಸ್ ಘಟಕ ಸಂಚಾಲಕಿ ಕವಿತಾ ಸ್ವಾಗತಿಸಿದರು. ಡಾ.ಸಫಿಯಾ ವಂದಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ರಾಕೇಶ್ ನಿರೂಪಿಸಿದರು.