ಲೋಕಬಂಧು ನ್ಯೂಸ್ ದಾವಣಗೆರೆ
ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ತಮ್ಮದೇ ರಾಜಕೀಯ ವೇದಿಕೆಯೊಂದು ಹೊರಹೊಮ್ಮಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಹೊಸ ರೀತಿಯ ಬದಲಾವಣೆಗಳು ನಡೆಯಲಿವೆ ಎಂದರು.
ತನ್ನ ರಾಜಕೀಯ ಪ್ರವಾಸ ಹಾಗೂ ಮುಂದಿನ ನಡೆ ಕುರಿತು ಮಾತನಾಡಿದ ಯತ್ನಾಳ್, ಟಿವಿಕೆ ಮಾದರಿಯಲ್ಲಿ ನಮ್ಮದೇ ರಾಜಕೀಯ ವೇದಿಕೆ ಮುಂದಿನ ದಿನಗಳಲ್ಲಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಂಥ ಸಂದರ್ಭದಲ್ಲಿ ಈಗ ನನ್ನ ಹೇಳಿಕೆಗಳನ್ನು ಟೀಕಿಸುತ್ತಿರುವ ಮಾಧ್ಯಮಗಳೇ ನನ್ನನ್ನು ಹೊಗಳುವ ಪರಿಸ್ಥಿತಿ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ ಅವರು, ಆ ಮೂಲಕ ರಾಜ್ಯ ರಾಜಕೀಯದಲ್ಲಿ ಪರ್ಯಾಯ ರಾಜಕೀಯ ವೇದಿಕೆಯ ಅಗತ್ಯವಿದೆ ಎಂಬ ತಮ್ಮ ನಿಲುವನ್ನು ಯತ್ನಾಳ್ ವ್ಯಕ್ತಪಡಿಸಿದರು.
ಬಸ್ ಮೂಲಕ ರಾಜ್ಯ ಪ್ರವಾಸಕ್ಕೆ ಟೀಕೆ ಏಕೆ
ತಾನು ಬಸ್ ಮೂಲಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದನ್ನು ಕೆಲವರು ಟೀಕಿಸುತ್ತಿದ್ದಾರೆ ಎಂದು ಹೇಳಿದ ಯತ್ನಾಳ್, ಜನರ ನಡುವೆ ಸಂಚರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಉದ್ದೇಶದಿಂದ ಪ್ರವಾಸ ಮಾಡುತ್ತಿರುವುದಾಗಿ ಅವರು ಹೇಳಿದರು.
ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ನನಗೂ ಮಹತ್ವದ ಜವಾಬ್ದಾರಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಯತ್ನಾಳ್, ನಾನೂ ಮುಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕಾಲ ಬರುತ್ತದೆ ಎಂದರು.
ತಾನು ಯಾವುದೇ ವಿಷಯದ ಬಗ್ಗೆ ಮಾತನಾಡಿದರೂ ಅದನ್ನು ವಿವಾದಾತ್ಮಕ ಹೇಳಿಕೆ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ತನ್ನ ಹೇಳಿಕೆಗಳ ಹಿಂದಿನ ಸಂದರ್ಭ ಹಾಗೂ ಉದ್ದೇಶವನ್ನು ಗಮನಿಸದೆ ಅವುಗಳನ್ನು ವಿವಾದದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಸ್ವಾಭಿಮಾನವಿದ್ದರೆ ಕಾಂಗ್ರೆಸ್ ತೊರೆಯಲಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಚುನಾವಣಾ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಬಳಿಕ ಇದೀಗ ರಾಜಕೀಯದಿಂದ ಬೇಸರವಾಗಿದೆ ಎಂದು ಹೇಳುತ್ತಿರುವುದು ವ್ಯಂಗ್ಯಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ದೊಡ್ಡ ಸಾಮಾಜಿಕ ಹಿನ್ನೆಲೆಯಿಂದ ಬಂದ ಪ್ರಮುಖ ನಾಯಕ. ಅವರ ಆರ್ಥಿಕ ನೀತಿಗಳನ್ನು ತಾನು ಗಮನಿಸಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷವೇ ಸಿದ್ದರಾಮಯ್ಯ ಅವರ ರಾಜಕೀಯ ಮೌಲ್ಯವನ್ನು ಕುಗ್ಗಿಸಿದೆ ಎಂದು ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನವಿದ್ದರೆ ಕಾಂಗ್ರೆಸ್ ಪಕ್ಷ ತೊರೆದು ಹೊರಬರಬೇಕು ಎಂದು ಯತ್ನಾಳ್ ಸಲಹೆ ನೀಡಿದರು.