ಲೋಕಬಂಧು ನ್ಯೂಸ ಬೆಂಗಳೂರು
ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವ ಬದಲು ತಮ್ಮ ಊರುಗಳಲ್ಲೇ ಉದ್ಯಮ ಆರಂಭಿಸಿ ಉದ್ಯಮಿಗಳಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ 'ಕೈಲ್ ಮುಹೂರ್ತ ಜಂಬರ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ವಿಶೇಷ ನೀತಿ ರೂಪಿಸಿದೆ. ಸ್ಥಳೀಯರ ಪ್ರತಿಭೆ, ನೈಸರ್ಗಿಕ ಸಂಪತ್ತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ ಇದರ ಉದ್ದೇಶ.
ಕೊಡಗು ಶೌರ್ಯ, ಸಂಸ್ಕೃತಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಇತಿಹಾಸ ಹೊಂದಿದೆ. ಕಾಫಿ, ಮಸಾಲೆ ಪದಾರ್ಥಗಳು ಹಾಗೂ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಪ್ರವಾಸೋದ್ಯಮದ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಆ ಭಾಗದಲ್ಲಿ ಪ್ರವಾಸೋದ್ಯಮ ಸಂಬಂಧಿತ ಉದ್ಯಮ ಆರಂಭಿಸುವವರಿಗೆ ಸಾಲದ ಅವಧಿ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಮಂಗಳೂರಿನಲ್ಲಿ ಸಭೆ ಕರಾವಳಿಯ 327 ಕಿ.ಮೀ. ಉದ್ದದ ಪ್ರದೇಶವನ್ನು ಗೋವಾ ಮತ್ತು ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಶೀಘ್ರದಲ್ಲೇ ಉದ್ಯಮಿಗಳ ಸಭೆ ನಡೆಸಿ, ಆ ಭಾಗದ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು. ಹೊರಗಿನವರು ಬಂದು ಉದ್ಯಮ ಆರಂಭಿಸುವುದಕ್ಕಿಂತ ಸ್ಥಳೀಯರೇ ಉದ್ಯಮ ಆರಂಭಿಸಿ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಶಿವಕುಮಾರ್ ಹೇಳಿದರು.
ಮಂಗಳೂರಿನಲ್ಲಿ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ಗೆ 10 ಎಕರೆ ಜಾಗ ನೀಡಲು ಸಚಿವ ಸಂಪುಟ ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು.
ಮತದಾನದ ಹಕ್ಕು ರಕ್ಷಿಸಿಕೊಳ್ಳಿ
ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸುವುದು ಅತ್ಯಂತ ಮುಖ್ಯ. ಒಂದಕ್ಕಿಂತ ಹೆಚ್ಚು ಮತ ಹೊಂದಿರುವವರು ಹಾಗೂ ಮೃತಪಟ್ಟವರ ಹೆಸರುಗಳನ್ನು ಮಾತ್ರ ಪರಿಷ್ಕರಿಸಿ, ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯದಂತೆ ನೋಡಿಕೊಳ್ಳಬೇಕು. ಮತದಾನದ ಹಕ್ಕು ಸಂವಿಧಾನ ನೀಡಿರುವ ಶಕ್ತಿ ಎಂದರು.
ವಿಭಿನ್ನ ದಸರಾ
ಈ ಬಾರಿ ದಸರಾವನ್ನು ವಿಭಿನ್ನವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಸೇನಾ ಪಡೆಗಳು, ವಿವಿಧ ಭಾಗಗಳ ಕಲಾವಿದರು ಹಾಗೂ ಎಲ್ಲಾ ಸಮುದಾಯಗಳ ಪ್ರತಿನಿಧಿಗಳಿಗೆ ದಸರಾ ಮೆರವಣಿಗೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.