ಹಂಗಾರಕಟ್ಟೆ ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ಪರಾರಿ; ದೇವತಾ ಮೂರ್ತಿಗಳ ಮಾರಾಟ ಶಂಕೆ

ಲೋಕಬಂಧು ನ್ಯೂಸ್ | ಬ್ರಹ್ಮಾವರ
ಹಂಗಾರಕಟ್ಟೆ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ಪರಾರಿಯಾಗಿದ್ದು ಭಕ್ತರು ಆತಂಕಗೊಂಡಿದ್ದಾರೆ.
ಬುಧವಾರ ಸಂಜೆಯ ಬಳಿಕ ಮಠಕ್ಕೆ ಬೀಗ ಹಾಕಲಾಗಿದ್ದು, ಇದೇ ವೇಳೆ ಮಠದ ವಿಗ್ರಹಗಳನ್ನು ಮಾರಾಟ ಮಾಡಿರುವ ಬಗ್ಗೆಯೂ ಸಂದೇಹವಿದ್ದು‌, ಆ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ಹಂಗಾರಕಟ್ಟೆ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ‌ ಸ್ವಾಮೀಜಿ ವಿರುದ್ಧ ಅನೇಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಾಮೀಜಿ ಪೀಠ ತ್ಯಾಗ  ಮಾಡಬೇಕು ಎಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿ ಸದಸ್ಯರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಮಠದಲ್ಲಿ ಈ ಹಿಂದಿನ ನೃಸಿಂಹಾಶ್ರಮ ಸ್ವಾಮೀಜಿ ಆಡಳಿತಾವಧಿಯಲ್ಲಿ ದೇವಸ್ಥಾನದ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆದವು. ಈಗಿನ ಸ್ವಾಮೀಜಿ ಅವಧಿಯಲ್ಲಿ ಇದು ಎಲ್ಲೆ ಮೀರಿದ್ದು, ಮಠದ ಸಂಪ್ರದಾಯಕ್ಕೆ ವಿರುದ್ಧವಾಗಿ ವಿವಿಧ ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.


ಇದೀಗ ಭಕ್ತರು ಪೊಲೀಸ್ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅಗತ್ಯ ಕ್ರಮಕ್ಕೆ ಮನವಿ ಮಾಡಿದ್ದಾರೆ.