ಲೋಕಬಂಧು ನ್ಯೂಸ್ | ಉಡುಪಿ
ರೋಗ ಬಂದ ಬಳಿಕ ಔಷಧ ಸೇವನೆಗಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ರೋಗ ಬಾರದಂತೆ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಲಹೆ ನೀಡಿದರು.
ಸನಾತನ ಸಂಸ್ಥೆ ವತಿಯಿಂದ ನ.29ರಂದು ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀ ಮಹಾಧನ್ವಂತರಿ ಯಾಗ ಹಿನ್ನೆಲೆಯಲ್ಲಿ ಪೇಜಾವರ ಮಠದ ಹಿಂಭಾಗದಲ್ಲಿ ಆರಂಭಿಸಲಾದ ಕಾರ್ಯಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪಥ್ಯಾಹಾರ ಸೇವನೆ ಮುಖ್ಯ. ಅಪಥ್ಯದಿಂದ ಕಾಯಿಲೆಗಳು ಬರುತ್ತವೆ. ರೋಗ ರಹಿತ ಬದುಕಿಗೆ ದೇವರ ಅನುಗ್ರಹದ ಜೊತೆಗೆ ನಮ್ಮ ಪ್ರಯತ್ನವೂ ಬೇಕು. ಅಪಥ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವ ಕಾರ್ಯವಾಗಬೇಕು ಎಂದವರು ಆಶಿಸಿದರು.
ಲೋಕಕಲ್ಯಾಣ ಹಾಗೂ ಧರ್ಮಸಂಸ್ಥಾಪನೆ ಆಶಯದಿಂದ ನಡೆಯುವ ಮಹಾಧನ್ವಂತರಿ ಯಾಗ ಕಾರ್ಯಕ್ರಮದಿಂದ ಸಮಾಜಕ್ಕೆ ಒಳಿತಾಗಲಿದ್ದು ಸಾರ್ವಜನಿಕರ ಆರೋಗ್ಯ ವೃದ್ಧಿ ಮತ್ತು ಸದ್ಭಾವನೆಗಾಗಿ ಹಮ್ಮಿಕೊಳ್ಳಲಾಗಿರುವ ಮಹಾಯಾಗ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿ ಸಂಚಾಲಕ ಗುರುಪ್ರಸಾದ್ ಗೌಡ, ಯಾಗದ ಸಿದ್ಧತೆಗಳಿಗಾಗಿ ಈಗಾಗಲೇ ಮೂರು ಪೂರ್ವಭಾವಿ ಸಭೆ ನಡೆದಿದ್ದು, ಯಾಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು, ಧರ್ಮಪ್ರೇಮಿಗಳು ಕೈಜೋಡಿಸಿದ್ದಾರೆ ಎಂದರು.
ಯಾಗ ಸಮಿತಿ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ಕಾರ್ಯಕ್ರಮದ ಸಿದ್ಧತೆ ಬಗ್ಗೆ ವಿವರಿಸಿದರು.
10 ಸಾವಿರ ಮಂದಿಯ ನಿರೀಕ್ಷೆ
ಉಡುಪಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಾಧನ್ವಂತರಿ ಯಾಗದಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. 10 ಸಾವಿರ ಮಂದಿಯ ನಿರೀಕ್ಷೆ ಇದೆ. ಆಹಾರ, ಔಷಧದ ಸಮನ್ವಯ ಉತ್ತಮ ಆರೋಗ್ಯಕ್ಕೆ ಪೂರಕವಾಗಲಿದ್ದು, ಆ ನಿಟ್ಟಿನಲ್ಲಿ ಯಾಗ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ, ಹಿಂದೂ ಜನಜಾಗೃತಿ ವೇದಿಕೆಯ ಚಂದ್ರ ಮೊಗವೀರ, ಪ್ರಮುಖರಾದ ಮಂಜುನಾಥ್ ಮಣಿಪಾಲ, ತಾರಾ ಉಮೇಶ ಆಚಾರ್ಯ ಮೊದಲಾದವರಿದ್ದರು.
ಸೌಪಜ್ಞ ರಾವ್ ಸ್ವಾಗತಿಸಿ, ನಿರೂಪಿಸಿದರು. ಪ್ರಭಾಕರ ಪಡಿಯಾರ್ ಶ್ರೀಪಾದರನ್ನು ಗೌರವಿಸಿದರು.
.jpg)
.jpg)