ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ

ಲೋಕಬಂಧು ನ್ಯೂಸ್ ಉಡುಪಿ
ಹಿಂದಿನ ಸರಕಾರಗಳು ಸ್ಥಾಪಿಸಿದ್ದ ಸಂಸ್ಥೆಗಳು, ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಸರಕಾರ ಯುವ ಜನರ ಉದ್ಯೋಗ ಕಸಿದುಕೊಂಡಿದೆ. ಕೋಟ್ಯಾಂತರ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆ ನೀಡಿದ್ದ ಬಿಜೆಪಿಯವರು ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಶೆಟ್ಟಿ ಸವಾಲೆಸೆದರು.ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಉಡುಪಿ ಜಿಲ್ಲೆಯಲ್ಲಿ ನಾವು ಚುನಾವಣೆಯಲ್ಲಿ ಮಾತ್ರ ಸೋತಿದ್ದು, ಜನರ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ ಎಂದು ಹೇಳಿದ ಹೆಗ್ಡೆ ಅವರು, ಕಾಂಗ್ರೆಸ್ ಭರವಸೆ ನೀಡಿದ್ದ ಪಂಚ ಗ್ಯಾರಂಟಿ ಜಾರಿಯಾದರೂ ಜನಧನ್ ಯೋಜನೆಯಡಿ ಕೊಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಯಾವ ಅನುದಾನವನ್ನೂ ಈವರೆಗೆ ಕೊಟ್ಟಿಲ್ಲ ಎಂದು ಬೊಟ್ಟುಮಾಡಿದರು.


ಎಸ್ಐಆರ್ ಮೂಲಕ ರದ್ದು ಮಾಡಲಾದ ಮತಗಳನ್ನು ಮತ್ತೆ ಸೇರಿಸಲು ಚುನಾವಣಾ ಆಯೋಗ ಆದೇಶ ಮಾಡಿರುವುದು 'ತಪ್ಪು ಒಪ್ಪಿಕೊಂಡಂತೆ' ಎಂದು ಜಯಪ್ರಕಾಶ್ ಹೆಗ್ಡೆ ವ್ಯಾಖ್ಯಾನಿಸಿದರು.


ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಮಹಿಳೆಯರು, ಹಿಂದುಳಿದವರು ಹಾಗೂ ದಲಿತರಿಗೆ ಏನೇ ಕೊಟ್ಟರೂ ಅಪಪ್ರಚಾರ, ಬಿಟ್ಟಿ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಆದಿಯಾಗಿ ಎಲ್ಲಾ ಬಿಜೆಪಿಯವರು ಅವಹೇಳನ ಮಾಡಿದ್ದು, ಆ ಬಗ್ಗೆ ಬಿಜೆಪಿ ಮತದಾರರಲ್ಲಿ ಕ್ಷಮೆ ಕೇಳಬೇಕು ಎಂದರು. ಮಹಿಳಾ ಶಕ್ತಿ ರಾಷ್ಟ್ರ ಶಕ್ತಿಯಾಗಬೇಕು ಎಂದವರು  ಆಶಿಸಿದರು.


ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ನೀಡಿದರೆ, ಕೇಂದ್ರದ ಬಿಜೆಪಿ ಆಡಳಿತಕ್ಕೆ ‘ಓಟು ಗ್ಯಾರಂಟಿ’ ಕೊಡಲೂ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ‌‌ ಅಧ್ಯಕ್ಷ ರಮೇಶ್ ಕಾಂಚನ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ (ಉತ್ತರ ವಲಯ) ಅಧ್ಯಕ್ಷೆ ಶಾಂತಾ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿವಾಕರ ಕುಂದರ್, ಕಾಂಗ್ರೆಸ್ ಮುಖಂಡ ನಾಗೇಶ್ ಕುಮಾರ್ ಉದ್ಯಾವರ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುಷ್ಪಾ ಅಂಚನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ ವಲಯ) ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕಿ ಅಮೃತಾ ಉಮೇಶ್ ಪೂಜಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ್ ಶೆಟ್ಟಿ ನಿಟ್ಟೆ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಡಾ.ಸಂತೋಷ್ ಕುಮಾರ್ ಭೈರಂಪಳ್ಳಿ, ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ಯಾಮಲಾ ಸುಧಾಕರ್, ಕಾಪು ಅಕ್ರಮ ಸಕ್ರಮ ಸದಸ್ಯ ಆನಂದ ಕೊರಂಗ್ರಪಾಡಿ ಮೊದಲಾದವರಿದ್ದರು.


ಗ್ರಾಮೀಣ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಅಶೋಕ್ ಶೇರಿಗಾರ್ ಅವರು ನಿರ್ಗಮನ ಅಧ್ಯಕ್ಷ ಸುಧಾಕರ ಪೂಜಾರಿ ಅವರಿಂದ ಕಾಂಗ್ರೆಸ್ ಧ್ವಜ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.


ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದರು. ಕುಸುಮಾ ಕಾಮತ್ ಕರ್ವಾಲು ಅವರು ತಾವು ರಚಿಸಿದ ಪಂಚ ಗ್ಯಾರಂಟಿ ಆಶಯ ಗೀತೆ ಹಾಡಿದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಲತಾ ಹಾಗೂ ಗುರುರಾಜ್ ಸಾಮಗ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಮೆಸ್ಕಾಂ ಸಿಬ್ಬಂದಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ,ಬಿಎಲ್ಒಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಕಾಂಗ್ರೆಸ್ ರತ್ನ‘ ಮತ್ತು ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.