ಕೇರಳಿಗರ ಸಂಸ್ಕೃತಿ ಪ್ರೀತಿ ಅನನ್ಯ

ಲೋಕಬಂಧು ನ್ಯೂಸ್ | ಉಡುಪಿ, ಸೆ.25
ಕೇರಳಿಗರು ಬುದ್ದಿವಂತರು, ಸಂಸ್ಕಾರವಂತರು ಮಾತ್ರವಲ್ಲದೆ ವಿದ್ಯಾವಂತರು. ಅವರು ಎಲ್ಲೇ ಇದ್ದರೂ ತಮ್ಮ ಸಂಸ್ಕಾರ, ಸಂಸ್ಕೃತಿ ಬಿಡಲಾರರು. ಭಾಷೆಯ ಮೇಲಿನ ಅವರ ಅಭಿಮಾನ ಅನನ್ಯ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ (ಕೆಸಿಎಸ್.ಸಿ.) ವತಿಯಿಂದ ನಡೆದ ಓಣಂ ಆಚರಣೆ ಹಾಗೂ 32ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೇರಳಿಗರು ವಿಶ್ವದ ಎಲ್ಲೆಡೆ ಇದ್ದಾರೆ. ಅವರು ಯಾವುದೇ ಕೆಲಸಕ್ಕೂ ಸೈ ಎನಿಸುತ್ತಾರೆ. ಕೇರಳ ಹಾಗೂ ತುಳುನಾಡಿಗೆ ಅವಿನಾಭಾವ ಸಂಬಂಧವಿದೆ. ವ್ಯಾವಹಾರಿಕವಾಗಿಯೂ ಕೇರಳದ ಕರಾವಳಿಯಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯುದ್ಧಕ್ಕೂ ಇರುವ ಕರಾವಳಿಯಲ್ಲಿ ಸೌಹಾರ್ದ ಸಂಬಂಧ ಹೊಂದಿದ್ದಾರೆ.


ಮೂಲತಃ ಕೇರಳಿಗರಾಗಿದ್ದರೂ ನಮ್ಮ ತುಳುನಾಡಿನ ಸಂಸ್ಕೃತಿ ಯನ್ನು ಕೂಡಾ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಪ್ರಶಂಸನೀಯ ಎಂದರು.


ನಟ, ಲೇಖಕ ಹಾಗೂ ಗಾಯಕ ರಾಜೇಶ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.


ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಅಧ್ಯಕ್ಷ ರಾಜನ್ ಫಿಲಿಪ್ಸ್ ಅಧ್ಯಕ್ಷತೆ ವಹಿಸಿದರು.


ಬೆಂಗಳೂರಿನ ನಾರ್ಕಾ ಡೆವಲಪ್‌ಮೆಂಟ್ ಆಫೀಸರ್ ಜಯಪ್ರಕಾಶ್ ಎಂ.ಕೆ. ಮಾತನಾಡಿದರು.


ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವಿನೋದ್ ವಿ.ಥಾಮಸ್ (ಶಿಕ್ಷಣ), ಡಾ.ರಾಜೇಶ್ ನಾಯರ್ (ಆರೋಗ್ಯ), ಎಂ.ಎಲ್.ಜೋಸೆಫ್ (ಕೃಷಿ), ಲಿಯಾಖತ್ ಅಲಿ (ಕಲೆ ಮತ್ತು ಸಂಸ್ಕೃತಿ) ಹಾಗೂ ಕುಮಾರಿ ಸಾನ್ವಿ ರಾಜೇಶ್ (ನೃತ್ಯ) ಅವರಿಗೆ ಕೆಸಿಎಸ್.ಸಿ ಪಂಚರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಸದಸ್ಯರ ಕುಟುಂಬಗಳ 11 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ತಲಾ 5 ಸಾವಿರ ನಗದು ಪುರಸ್ಕಾರ ನೀಡಲಾಯಿತು.


ಈ ಸಂದರ್ಭದಲ್ಲಿಉಡುಪಿ ಮಿತ್ರಾ ಆಸ್ಪತ್ರೆ ಸಹಯೋಗದಲ್ಲಿ  ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು ನಡೆಯಿತು.


ಮಕ್ಕಳು ಸೇರಿದಂತೆ ಸುಮಾರು 80 ಮಂದಿ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಕುಟುಂಬ ಸದಸ್ಯರು ನಡೆಸಿಕೊಟ್ಟ ವಿವಿಧ ನೃತ್ಯ, ಸಂಗೀತ ಹಾಗೂ ಕಲಾ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು.


ಕೇರಳದ ವಿಶಿಷ್ಟ  ಅತ್ತಪ್ಪೂಕಳಂ, ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು, ಓಣಂ ಸದ್ಯ ಹಾಗೂ ಕೆಸಿಎಸ್.ಸಿ. ಓಣಂ ಗೀತೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಯುವ ಘಟಕ ಮತ್ತು ಸೂಪರ್ ಸೆವೆಂಟಿ ಘಟಕವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.


ಕೇರಳ ಕಣ್ಣೂರಿನ ಕಲಾಭವನ್ ರಾಜೇಶ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.


ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಮಾಜಿ ಅಧ್ಯಕ್ಷ ಸುಗುಣ ಕುಮಾರ್, ಕೋಶಾಧಿಕಾರಿ ಶಾಜಿ ವ ಕರುಣ್ ವೇದಿಕೆಯಲ್ಲಿದ್ದರು.


ಕಾರ್ಯದರ್ಶಿ ಬಿನೇಶ್ ವಿ.ಸಿ. ವರದಿ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಿನಿಲ್ ವಿ.  ಸ್ವಾಗತಿಸಿದರು. ಓಣಂ ಸಮಿತಿ ಅಧ್ಯಕ್ಷ ಶಿನೋಡ್ ಟಿ.ಆರ್. ವಂದಿಸಿದರು.