ಲೋಕಬಂಧು ನ್ಯೂಸ್ | ಉಡುಪಿ, ಮಾ.13
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣವನ್ನು ಘಟನೆ ನಡೆದ 12 ಗಂಟೆಯೊಳಗೆ ಭೇದಿಸಿ ಇಬ್ಬರು ಆರೋಪಿಗಳು ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ವಶಕ್ಕೆ ಪಡೆಯುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ 4.47 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ಹನುಮಂತ ನಗರ ನಿವಾಸಿ ಸಂತೋಷ ಅಲಿಯಾಸ್ ಸಂತೋಷ ಪೊರೆಷಿ (20), ಕಲ್ಮಾಡಿ ನಿವಾಸಿ ಚಿರಂತನ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕರು ಬಂಧಿತರು.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರ ನಿವಾಸಿ ಸಂಗೀತ ಮಡಿವಾಳ ಮಾ.12ರಂದು ಗುರುವಾರ ಬೆಳಗ್ಗೆ 8 ಗಂಟೆಗೆ ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳಿ ಬಂದಾಗ ಮನೆಯ ಹಂಚು ತೆಗೆದು ಒಳಪ್ರವೇಶಿಸಿ ಕಪಾಟಿನಲ್ಲಿ ಇದ್ದ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಕಳವು ಮಾಡಿರುವುದು ಪತ್ತೆಯಾಯಿತು.
ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು,
ಶುಕ್ರವಾರ ಶಿವಳ್ಳಿ ಗ್ರಾಮದ ಶಿಂಬ್ರ ಸೇತುವೆ ಸಮೀಪ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಇಬ್ಬರು ಬಾಲಕರನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು.
ಅವರಿಂದ ಕೃತ್ಯಕ್ಕೆ ಬಳಸಿದ ಸಾಮಗ್ರಿ ಹಾಗೂ 4.47 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
.jpg)
.jpg)