ಲೋಕಬಂಧು ನ್ಯೂಸ್ ಉಡುಪಿ, ಮಾ.12
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಕರಾವಳಿ ಭಾಗದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಅನುದಾನ, ಯೋಜನೆಗಳನ್ನು ಘೋಷಿಸದೇ ದಿವ್ಯ ನಿರ್ಲಕ್ಷ್ಯ ಮುಂದುವರಿಸಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.ಈ ಬಾರಿಯ ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅನುದಾನ ನೀಡಿಲ್ಲ. ಮೀನುಗಾರಿಕೆ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೀನುಗಾರರ ಬೇಡಿಕೆಯಾದ ಡೀಸೆಲ್ ಸಬ್ಸಿಡಿ ಮಿತಿ ಹೆಚ್ಚಳ, ಮೀನುಗಾರಿಕೆ ಸಂಬಂಧಿ ಉದ್ಯಮಗಳಿಗೆ ಪ್ರೋತ್ಸಾಹ, ಬಂದರುಗಳ ಹೂಳು ತೆರವು, ಮೀನುಗಾರಿಕೆ ಚಟುವಟಿಕೆಗಳಿಗೆ ಶೂನ್ಯ ಬಡ್ಡಿ ದರದ ಸಾಲ ಯೋಜನೆ, ಮಹಿಳಾ ಮೀನುಗಾರರ ಸಾಲ ಮನ್ನಾ, ಕಡಲ್ಕೊರೆತ ಶಾಶ್ವತ ಪರಿಹಾರ, ಮೀನುಗಾರಿಕೆ ರಸ್ತೆಗಳ ಅಭಿವೃದ್ಧಿ, ಮತ್ಸ್ಯಾಶ್ರಯ ವಸತಿ ಯೋಜನೆ ಸಹಾಯಧನ 5 ಲಕ್ಷಕ್ಕೆ ಹೆಚ್ಚಳದಂಥ ಯಾವುದೇ ಬೇಡಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಕ್ರಮ ಕೈಗೊಂಡಿಲ್ಲ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಸಾಗರಮಾಲಾ ಯೋಜನೆ ಮೂಲಕ ರಾಜ್ಯದ ಮೀನುಗಾರಿಕೆ ಬಂದರು ಹಾಗೂ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ರಾಜ್ಯ ಸರ್ಕಾರ ಪೂರಕ ಸ್ಪಂದನೆ ನೀಡದೆ ಮೀನುಗಾರರ ಬಗ್ಗೆ ಅಸಡ್ಡೆ ಮುಂದುವರಿಸಿದೆ.
ಮೀನುಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮಲ್ಪೆ ಬಂದರಿನಲ್ಲಿ ಮೀನುಗಾರರು ಹಗಲಿರುಳು ಶ್ರಮಿಸಿ ತಂದ ಮೀನು ಕದ್ದ ಕಳ್ಳರ ಪರ ಪ್ರತಿಭಟನೆ ನಡೆಸುವ ಸಂಘಟನೆಯ ಮುಖಂಡರು ಯಾವುದೇ ಚಕಾರ ಎತ್ತುತ್ತಿಲ್ಲ.
ಕರಾವಳಿ ಮೀನುಗಾರರ ಬೇಡಿಕೆ ಕಡೆಗಣಿಸಿ ತಾಳ್ಮೆ ಪರೀಕ್ಷಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ಎಚ್ಚರಿಸಿದ್ದಾರೆ.