ಮಣಿಪಾಲ ಅಗ್ನಿಶಾಮಕ ಘಟಕ ಶಿಲಾನ್ಯಾಸ

ಲೋಕಬಂಧು ನ್ಯೂಸ್, ಉಡುಪಿ
ಮಣಿಪಾಲದ ಅದರ್ಶ ನಗರದಲ್ಲಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ಘಟಕ ಕಾಮಗಾರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ ನಗರದ ಬಹುವರ್ಷಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಘಟಕ ಸ್ಥಾಪನೆಗೆ ತನ್ನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಆಗ್ನಿಶಾಮಕ ಘಟಕ ಮಂಜೂರು ಮಾಡಿದ್ದು, ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ.


ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕೈಗಾರಿಕಾ ಪ್ರದೇಶ, ಬೃಹತ್ ವಸತಿ ಸಮುಚ್ಚಯಗಳನ್ನೊಳಗೊಂಡ ಮಣಿಪಾಲ ನಗರಕ್ಕೆ ತುರ್ತು ಸಂದರ್ಭದಲ್ಲಿ ಉಡುಪಿಯಿಂದ ಅಗ್ನಿಶಾಮಕ ವಾಹನ ಬರುವ ಅನಿವಾರ್ಯತೆ ಹಿನ್ನೆಲೆಯಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಲು ವಿಳಂಬವಾಗುತ್ತಿದ್ದು ಈ ಭಾಗಕ್ಕೆ ಅತ್ಯಾವಶ್ಯಕವಾಗಿದ್ದ ಅಗ್ನಿಶಾಮಕ ಘಟಕ ಶೀಘ್ರ ಕಾರ್ಯಾರಂಭಗೊಳ್ಳುವ ಮೂಲಕ ಜನರ ಸೇವೆಗೆ ಲಭಿಸಲಿದೆ ಎಂದರು.


ಮಣಿಪಾಲ ವಾರ್ಡ್ ನಗರಸಭಾ ಮಾಜಿ ಸದಸ್ಯ ಮಂಜುನಾಥ ಮಣಿಪಾಲ ಮಾತನಾಡಿ, ಮಣಿಪಾಲ ಭಾಗಕ್ಕೆ ಅತೀ ಅವಶ್ಯಕವಾಗಿದ್ದ ಅಗ್ನಿಶಾಮಕ ಘಟಕ ಆರಂಭಕ್ಕೆ ವಿಶೇಷ ಮುತುವರ್ಜಿ ವಹಿಸಿ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಸಕ ಯಶಪಾಲ್ ಸುವರ್ಣ ಅವರಿಗೆ ಜನತೆಯ ಪರವಾಗಿ ಅಭಿನಂದನೆ  ಸಲ್ಲಿಸುವುದಾಗಿ ತಿಳಿಸಿದರು.


ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ಹರೀಶ್ ಶೆಟ್ಟಿ ಮತ್ತು ಟಿ.ಜಿ. ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಈಶ್ವರ ನಗರ ವಾರ್ಡ್ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಪ್ರಮುಖರಾದ ನರಸಿಂಹ ನಾಯಕ್, ಪೃಥ್ವಿರಾಜ್, ನಿತಿನ್ ಪೈ, ಗುರುರಾಜ್ ಭಂಡಾರಿ, ಸತೀಶ್ ಸಾಲ್ಯಾನ್ ಮೊದಲಾದವರಿದ್ದರು.