ಲೋಕಬಂಧು ನ್ಯೂಸ್, ಬೆಂಗಳೂರು
ಮಹಿಳಾ ದಿನಾಚರಣೆ ದಿನವೇ ದೇಶದ ಮಹಿಳೆಯರಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಡುಗೆ ಅನಿಲ ಬೆಲೆ ಏರಿಕೆಯ ಉಡುಗೊರೆ ನೀಡಿದೆ ಎಂದು ಕಿಡಿ ಕಾರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೇಂದ್ರದ ಈ ಕ್ರಮ ಅತ್ಯಂತ ದುಃಖಕರ ಹಾಗೂ ಖಂಡನೀಯ ಎಂದಿದ್ದಾರೆ.ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ 60 ರೂ. ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 115 ರೂ. ಏರಿಕೆ ಮಾಡಲಾಗಿದೆ. ಕಳೆದ 11 ತಿಂಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಒಟ್ಟು 110 ರೂ. ಹೆಚ್ಚಿರುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಹಾಕಿದಂತಾಗಿದೆ ಎಂದು ತಿಳಿಸಿದ್ದಾರೆ.
ಅಡುಗೆ ಅನಿಲ ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ಮನೆ ನಡೆಸುವ ಮಹಿಳೆಯರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಅಗತ್ಯ ವಸ್ತುವಿನ ಬೆಲೆ ಹೆಚ್ಚಿಸುವುದು ಮಹಿಳೆಯರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ತರುವ ಕ್ರಮವಾಗಿದೆ.
ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುವ ಕೇಂದ್ರ ಸರ್ಕಾರ, ಮಹಿಳೆಯರ ದಿನದಂದೇ ಇಂಥ ನಿರ್ಧಾರ ಕೈಗೊಂಡಿರುವುದು ಅತ್ಯಂತ ವಿಷಾದಕರ ಎಂದು ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉಂಟಾಗಿರುವ ಆರ್ಥಿಕ ಭಾರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.