ಲೋಕಬಂಧು ನ್ಯೂಸ್ ಉಡುಪಿ, ಮಾ.13
ಜಿಲ್ಲೆಯಲ್ಲಿ ಅಸಮರ್ಪಕ ಅಡುಗೆ ಅನಿಲ (ಎಲ್.ಪಿ.ಜಿ.) ಪೂರೈಕೆಯಲ್ಲಿನ ತೊಂದರೆಯಿಂದಾಗಿ ಹೋಟೆಲ್ ಉದ್ಯಮ ನಡೆಸುವುದೇ ದುಸ್ತರವಾಗಿದೆ. ಆಸ್ಪತ್ರೆ, ಶಾಲೆಗಳಂತೆ ಹೋಟೆಲ್'ಗಳನ್ನೂ ಅಗತ್ಯ ಸೇವೆ ಎಂದು ಪರಿಗಣಿಸಿ ಅನಿಲ ಪೂರೈಸಿ. ಇಲ್ಲವಾದರೆ ಜಿಲ್ಲೆಯಲ್ಲಿ ಸಾಮೂಹಿಕವಾಗಿ ಎಲ್ಲ ಹೋಟೆಲ್'ಗಳನ್ನೂ ಬಂದ್ ಮಾಡುವುದಾಗಿ ಜಿಲ್ಲೆಯ ಹೋಟೆಲ್ ಮಾಲಕರು ಎಚ್ಚರಿಸಿದ್ದಾರೆ.ಶುಕ್ರವಾರ ಇಲ್ಲಿನ ಡಯಾನಾ ಹೋಟೆಲ್'ನಲ್ಲಿ ನಡೆದ ಸಂಘದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಅನಿಲ ಪೂರೈಕೆಯ ವಾಸ್ತವ ಸಮಸ್ಯೆಯನ್ನು ತಿಳಿಸುವಂತೆ ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್, ಶಾಲೆ, ಆಸ್ಪತ್ರೆ ಕ್ಯಾಂಟೀನ್ ಇತ್ಯಾದಿಗಳಿಗೆ ಅನಿಲ ಪೂರೈಕೆ ನಡೆಯುತ್ತಿರುವಾಗ ಇತರ ಹೋಟೆಲ್, ಕ್ಯಾಂಟೀನ್'ಗಳ ಬೇಡಿಕೆಯ ಕನಿಷ್ಟ ಅರ್ಧದಷ್ಟು ಸಿಲಿಂಡರ್'ಗಳನ್ನಾದರೂ ಪೂರೈಸಿ ಎಂದು ಒಕ್ಕೊರಳಿನಿಂದ ಆಗ್ರಹಿಸಿದರು.
ರಾಜಕೀಯ ದೃಷ್ಟಿ ಬೇಡ
ಸಭೆಯಲ್ಲಿ ಭಾಗವಹಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುವ ಯುದ್ಧ ಭೀತಿಯಿಂದಾಗಿ ಉಂಟಾಗಿರುವ ಜಾಗತಿಕ ಸಮಸ್ಯೆಯ ಬಿಸಿ ನಮ್ಮ ದೇಶ, ಜಿಲ್ಲೆಗೂ ತಟ್ಟಿದೆ. ಪ್ರಧಾನಿ ಮೋದಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಇನ್ನೊಂದು ವಾರದೊಳಗಾಗಿ ಸಮಸ್ಯೆ ಪರಿಹಾರವಾಗುವ ವಿಶ್ವಾಸ ಇದೆ. ಈ ಸಮಸ್ಯೆಯನ್ನು ರಾಜಕೀಯ ದೃಷ್ಟಿಯಿಂದ ನೋಡಕೂಡದು ಎಂದು ಮನವಿ ಮಾಡಿದರು.
ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಹೋಟೆಲ್ ಮಾಲಕರು, ಅನಿಲ ವಿತರಕರ ಸಭೆ ನಡೆಸಲು ಸೂಚಿಸುವುದಾಗಿ ತಿಳಿಸಿದರು.
ಹೋಟೆಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ನಾಗೇಶ ಭಟ್, ಸದಸ್ಯರಾದ ಡಯಾನ ವಿಠಲ ಪೈ ಮತ್ತು ಲಕ್ಷ್ಮಣ ವಾಗ್ಳೆ, ಅನಿಲ ವಿತರಕ ದಿನೇಶ ಪುತ್ರನ್ ಇದ್ದರು.
ಹೋಟೆಲ್ ಮಾಲಕರಾದ ಜಗದೀಶ ಕಾಮತ್ ಕಟಪಾಡಿ, ದೇವೇಂದ್ರ ಪ್ರಭು ಮಣಿಪಾಲ, ಶಿವಪ್ರಸಾದ ಶೆಟ್ಟಿ ಮೊದಲಾದವರು ಮಾತನಾಡಿದರು.