ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ

ಲೋಕಬಂಧು ನ್ಯೂಸ್, ನವದೆಹಲಿ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಸನ್ನಿವೇಶದ ನಡುವೆ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 60 ರೂ. ಹೆಚ್ಚಳ ಮಾಡಲಾಗಿದ್ದು, ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 853ರಿಂದ 913ಕ್ಕೆ ಏರಿಕೆಯಾಗಿದೆ.ಜೊತೆಗೆ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನೂ 115 ರೂ. ಹೆಚ್ಚಿಸಲಾಗಿದೆ. ಈ ಹೆಚ್ಚಳದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,883 ರೂ. ತಲುಪಿದೆ. ಮುಂಬೈನಲ್ಲಿ 1,835 ರೂ. ಆಗಿದೆ.


ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾಕ್- ಇರಾನ್ ಸಂಘರ್ಷ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಈ ಬೆಳವಣಿಗೆಗಳು ತೈಲ ಮತ್ತು ಅನಿಲ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯ ಆತಂಕ ವ್ಯಕ್ತವಾಗಿದೆ.


ಉತ್ಪಾದನೆ ಹೆಚ್ಚಿಸಲು ಸೂಚನೆ
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ದೇಶದ ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್‌ಪಿಜಿ ಸಂಸ್ಕರಣಾಗಾರಗಳಿಗೆ ಉತ್ಪಾದನೆ ಹೆಚ್ಚಿಸಲು ಸೂಚಿಸಿದೆ. ಆ ಮೂಲಕ ದೇಶದಲ್ಲಿ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.


ಆತಂಕ ಬೇಡ
ಇಂಧನ ಕೊರತೆ ಕುರಿತು ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ.


ಭಾರತದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆ. ಆದ್ದರಿಂದ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ.


ಸರ್ಕಾರಿ ಮೂಲಗಳ ಪ್ರಕಾರ ಅಗತ್ಯವಿದ್ದಲ್ಲಿ ತೈಲ ಕಂಪನಿಗಳು ಗಲ್ಫ್ ಪ್ರದೇಶದ ಹೊರಗಿನ ದೇಶಗಳಿಂದಲೂ ಎಲ್‌ಪಿಜಿ ಆಮದು ಮಾಡುವ ಸಾಧ್ಯತೆ ಇದೆ.


ದರ ಪರಿಷ್ಕರಣೆ ಪ್ರಕ್ರಿಯೆ
ಸಾಮಾನ್ಯವಾಗಿ ಪ್ರತೀ ಮಾಸದ ಮೊದಲನೇ ದಿನಾಂಕಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು ಈಗಾಗಲೇ 110 ರೂ.ನಷ್ಟು ಹೆಚ್ಚಿಸಲಾಗಿತ್ತು. ಇದೀಗ ಗೃಹ ಬಳಕೆಯ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿರುವುದು ಸಾಮಾನ್ಯ ಗ್ರಾಹಕರಿಗೆ ಮತ್ತೊಂದು ಹೊರೆಯಾಗಿದೆ.