ಮಾ.14: ಬಜೆಟ್‌ನಲ್ಲಿ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ

ಲೋಕಬಂಧು ನ್ಯೂಸ್ ಉಡುಪಿ, ಮಾ. 12
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಕರಾವಳಿ ಜನತೆಯ ಪಾಲಿಗೆ ಕರಾಳ ಬಜೆಟ್ ಆಗಿದ್ದು, ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು  ನಿರಂತರ ಕಡೆಗಣನೆ ಮುಂದುವರಿಸಿರುವ ವಿರುದ್ಧ ಉಡುಪಿ ನಗರ ಬಿಜೆಪಿ ವತಿಯಿಂದ ನಗರದ ಆದರ್ಶ ಆಸ್ಪತ್ರೆ ಎದುರು ಮಾ.14ರಂದು ಸಂಜೆ 4.30ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಸರ್ಕಾರ ಜಿಲ್ಲೆಯನ್ನು ಕಡೆಗಣಿಸಿದೆ ಎಂಬ ಆಕ್ರೋಶ ಜಿಲ್ಲೆಯ ಜನತೆಯಲ್ಲಿ ಹೆಚ್ಚಾಗಿದೆ. ಕರಾವಳಿ ಭಾಗದ ಜನರು ಆರೋಗ್ಯ, ಶಿಕ್ಷಣ, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರೂ‌‌ ಈ ಬಾರಿ ಬಜೆಟ್‌ನಲ್ಲಿ ಯಾವುದೇ ವಿಶೇಷ ಯೋಜನೆಗಳು ಅಥವಾ ಮಹತ್ವದ ಅನುದಾನ ಘೋಷಣೆ ಆಗದಿರುವುದು ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಹೊಸ ಯೋಜನೆಗಳನ್ನು ಘೋಷಿಸುವ ಮಾತಿರಲಿ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ನಿರ್ವಹಣೆಗೂ ಅನುದಾನ ನೀಡಿಲ್ಲ.


ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಅಸ್ತಿತ್ವವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದು, ಉಡುಪಿ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಗಳಾದ ಜಿಲ್ಲಾಸ್ಪತ್ರೆ ಕಾಮಗಾರಿ, ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ನೂತನ ವಿದ್ಯಾರ್ಥಿ ನಿಲಯಗಳ ಮಂಜೂರಾತಿ. ಕೃಷಿ ಡಿಗ್ರಿ ಕಾಲೇಜು ಆರಂಭ, ಕರಾವಳಿಗೆ ಪ್ರತ್ಯೇಕ ಮರಳು ನೀತಿ, ನೀರಾವರಿ ಯೋಜನೆಗಳು, ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳು, ಸದೃಢ ಸರಕಾರಿ ಬಸ್ ವ್ಯವಸ್ಥೆ, ಪ್ರವಾಸೋದ್ಯಮಕ್ಕೆ ಉತ್ತೇಜನ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಉಪ ವಿಭಾಗಾಧಿಕಾರಿ ಕಚೇರಿ ಮಂಜೂರಾತಿ, ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ವಿಶೇಷ ಅನುದಾನ ಮೀಸಲಿರಿಸುವುದೂ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಸರ್ಕಾರದಿಂದ ಯಾವುದೇ ಅನುದಾನ ಘೋಷಣೆ ಆಗದಿರುವುದು ಜಿಲ್ಲೆಗೆ ಮಾಡಿರುವ ತೀವ್ರ ಅನ್ಯಾಯವಾಗಿದ್ದು, ಜಿಲ್ಲೆಯ ಜನತೆಯ ನಿರೀಕ್ಷೆಗೆ ಈ ಬಾರಿಯ ಬಜೆಟ್‌ನಲ್ಲಿ  ತಣ್ಣೀರು ಎರಚಿದಂತಾಗಿದೆ. ಪರಿಣಾಮವಾಗಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಕೇವಲ ಕನಸಿನ ಮಾತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದೇ ವೇಳೆ ಉಡುಪಿ ಜಿಲ್ಲೆಯ ಪ್ರಮುಖ ಆರ್ಥಿಕ ಆಧಾರವಾಗಿರುವ ಮಲ್ಪೆ ಸರ್ವಋತು ಮೀನುಗಾರಿಕೆ ಬಂದರು ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಈ ಬಾರಿಯ ಬಜೆಟ್‌ನಲ್ಲಿ ಇಡೀ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅದರಿಂದ ಜಿಲ್ಲೆಯ ಜನರ ನಿರೀಕ್ಷೆ ಭಗ್ನಗೊಂಡಿದ್ದು, ಅಭಿವೃದ್ಧಿ ಮೂಲೆಗುಂಪಾಗಿವೆ.


ಪ್ರತೀ ಬಾರಿಯಂತೆ ಸಿದ್ದರಾಮಯ್ಯ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಯಾವುದೇ ಅನುದಾನ, ಅಭಿವೃದ್ಧಿ ಯೋಜನೆಗಳನ್ನು ನೀಡದೇ ಸೇಡಿನ ರಾಜಕೀಯ ಮಾಡಲು ಮುಂದಾಗಿರುವುದು ಶೋಚನೀಯ.


ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಅತೀ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆಯ 17ನೇ ಬಜೆಟ್ ಬಗ್ಗೆ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿ ಗರಿಷ್ಠ ಸಾಲವನ್ನು ರಾಜ್ಯದ ಜನತೆಯ ಮೇಲೆ ಹೇರುವ ಮೂಲಕ 'ಸಾಲ ರಾಮಯ್ಯ' ಆಗಿದ್ದಾರೆ. ಅಭಿವೃದ್ಧಿ, ಮೂಲಭೂತ ಸೌಕರ್ಯ ಹಾಗೂ ಜನರ ಕಲ್ಯಾಣಕ್ಕಾಗಿ ಉಡುಪಿ ಜಿಲ್ಲೆಗೆ ನ್ಯಾಯಸಮ್ಮತ ಬಜೆಟ್ ಅನುದಾನ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ, ಜಿಲ್ಲೆಯ ಜನರ ನ್ಯಾಯಸಮ್ಮತ ಹಕ್ಕುಗಳನ್ನು ನಿರ್ಲಕ್ಷಿಸಿರುವುದರಿಂದ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.


ಈ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ, ತಾರತಮ್ಯ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.


ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನ್ಯಾಯ ಸಮ್ಮತ ಅನುದಾನ ನೀಡಬೇಕು. ಇಲ್ಲವಾದರೆ ಜನರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ತಡೆಯುವ ಯಾವುದೇ ನಿರ್ಲಕ್ಷ್ಯವನ್ನು ಜನರು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ ಎಂದರು.


ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ಮತ್ತು ಪ್ರಭಾಕರ ಪೂಜಾರಿ, ಪ್ರಮುಖರಾದ ದಿವಾಕರ ಶೆಟ್ಟಿ, ಶ್ರೀವತ್ಸ ಇದ್ದರು.