ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ವಿಶ್ವ ನಾಯಕರಿಗೆ ದೇವರು ಬೆಳಕಾಗಲಿ

ಉಡುಪಿ | ಲೋಕಬಂಧು ನ್ಯೂಸ್
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನೊಳಗೊಂಡಂತೆ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿಯ ಸೂಚನೆಯಂತೆ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಭಾನುವಾರ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬೆಳಗ್ಗಿನ ಬಲಿಪೂಜೆ ವೇಳೆ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಲ್ಲಿ ಧರ್ಮಗುರುಗಳು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಚರ್ಚುಗಳಲ್ಲಿ ಬಲಿಪೂಜೆಗೂ ಮುನ್ನ ಪರಮಪ್ರಸಾದದ ಆರಾಧನೆ ಆಯೋಜಿಸಲಾಗಿತ್ತು.


ಯುದ್ಧ ಭೀತಿ ಉಪಶಮನಗೊಂಡು ಮಧ್ಯಪ್ರಾಚ್ಯ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ಜಗತ್ತಿನ ಮುಖಂಡರಿಗೆ ದೇವರು ಬೆಳಕಾಗಲಿ ಎಂದು ಪ್ರಾರ್ಥಿಸಿದರು.  ಯುದ್ದಗಳಿಂದಾಗಿ ಆಮಾಯಕರು ತಮ್ಮ ಪ್ರಾಣ ಅರ್ಪಿಸಬೇಕಾಗಿದ್ದು ಅದರಿಂದಾಗಿ ಅವರ ಕುಟುಂಬ ವರ್ಗಕ್ಕೆ ಮರೆಯಲಾಗದ ನೋವು ಉಂಟಾಗುತ್ತದೆ. ಸ್ಪೋಟಕಗಳಿಂದಾಗಿ ಪರಿಸರದ ವಿನಾಶ ಆಗುತ್ತದೆ. ವಿಶ್ವದ ನಾಯಕರು ಯುದ್ದದ ಬದಲು ಸಂವಾದದ ಮೂಲಕ ಶಾಂತಿ ಮಂತ್ರ ಪಠಿಸುವ ಅಗತ್ಯತೆ ಇದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಲಿ ಎಂದು ಧರ್ಮಗುರುಗಳು ತಮ್ಮ ಸಂದೇಶದಲ್ಲಿ ಆಶಿಸಿದರು.


ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್'ನಲ್ಲಿ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿ'ಸೋಜಾ ನೇತೃತ್ವದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಸಂದೇಶದಲ್ಲಿ ಪ್ರತಿಯೊಂದು ಬಿಕ್ಕಟ್ಟುಗಳಿಗೆ ಯುದ್ದವೊಂದೇ ಪರಿಹಾರವಲ್ಲ. ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದುಃಖ ವಿಶ್ವಮಾನವ ಕುಟುಂಬಕ್ಕೆ ಘಾಸಿಯುಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲು ದೇವರು ವಿಶ್ವದ ನಾಯಕರಿಗೆ ಪ್ರೇರಣೆ ನೀಡಲಿ ಎಂದು ಆಶಿಸಿದರು.


ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಕಾರಿ ವಂ.ಡೆನಿಸ್ ಡೆಸಾ, ಉಡುಪಿ ಬಿಷಪ್ ಸೂಚನೆಯಂತೆ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗಿದೆ. ಮಾನವ ಜೀವ ಅಮೂಲ್ಯವಾಗಿದ್ದು ಅದರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.


ಮಾ. 14ರ ವರೆಗೆ ಪ್ರತಿದಿನ ಶಾಂತಿಗಾಗಿ ಜಪಿಸುವಂತೆ ಮನವಿ ಮಾಡಿದರು. ಮಾ.13ರಂದು ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಿ ವಿಶ್ವಶಾಂತಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲರ ಸುರಕ್ಷತೆಗೆ ಸಮರ್ಪಣಾ ದಿನವನ್ನಾಗಿ ಆಚರಿಸಲು ಕೋರಲಾಗಿದೆ ಎಂದರು.