ಲೋಕಬಂಧು ನ್ಯೂಸ್, ಮಂಗಳೂರು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ‘ಸಾರಿ ರನ್’ ಏರ್ಪಟ್ಟಿದ್ದು, ಬಣ್ಣ ಬಣ್ಣದ ಆಕರ್ಷಕ ಸೀರೆಯುಟ್ಟ ನೀರೆಯರ ಓಟ ಮುಂಜಾನೆ
ಆರಂಭಗೊಂಡು ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ಸರ್ಕಲ್, ಪಿವಿಎಸ್ ಮೂಲಕ ಸಿಟಿ
ಸೆಂಟರ್ ಮುಂಭಾಗಕ್ಕೆ ಆಗಮಿಸಿತು. ಒಟ್ಟು 3 ಕಿ.ಮೀ.ಗಳ ಓಟವನ್ನು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಮಹಿಳೆಯರಿಗೆಂದೇ ವಿಶೇಷವಾಗಿ ಸಂಘಟಿಸಲಾದ ಸಾರಿ ರನ್‌ನಲ್ಲಿ ತಾಯಿ- ಮಗಳು, ಅತ್ತೆ-ಸೊಸೆ, ಒಂದಿಡೀ ಕುಟುಂಬ, ಸ್ನೇಹಿತರ ಗುಂಪು ಹೀಗೆ ವೈವಿಧ್ಯಮಯವಾಗಿ ನಾರಿಯರು ಓಟಕ್ಕಿಳಿದಿದ್ದರು.
ಕಚೇರಿ, ಮನೆ ಎಂಬಿತ್ಯಾದಿ ವಿಷಯಗಳಲ್ಲಿಯೇ ತೊಡಗಿಕೊಂಡಿದ್ದ ಮಹಿಳೆಯರು ಸಾರಿ ರನ್‌ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಹಿಳೆಯರ ಫಿಟ್ನೆಸ್ ರನ್
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಆಯೋಜನೆಯಲ್ಲಿ ಫಿಟ್ನೆಸ್ ರನ್ ತಣ್ಣೀರುಬಾವಿ ಸರ್ಫ್ ಕ್ಲಬ್ ಜಂಕ್ಷನ್'ನಿಂದ ಶುರುವಾಯಿತು.ಈ ರನ್'ನಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಸದಸ್ಯರ ಜೊತೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸುಮಾರು 45 ಮಂದಿ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ಸರ್ಫ್ ಕ್ಲಬ್, ಕೆಐಒಸಿಎಲ್ ಜಂಕ್ಷನ್, ಎನ್ ಎಂಪಿಎ ವರೆಗೆ 5 ಹಾಗೂ 10 ಕಿ.ಮೀ. ಫಿಟ್ನೆಸ್ ರನ್ನಿಂಗ್, ವಾಕಿಂಗ್ ಹಾಗೂ ಜಾಗಿಂಗ್ ನಡೆಯಿತು.
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಚಾಲನೆ ನೀಡಿದರು. ಎಸಿಪಿ ವಿಜಯಕ್ರಾಂತಿ ಮೊದಲಾದವರಿದ್ದರು.
ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಜೋಯೆಲ್ ರೆಬೆಲ್ಲೊ, ಪ್ರಮುಖರಾದ ಋತು ಬರಿವಾಲ್, ಅಮರ್ ಕಾಮತ್, ರಾಯ್ ಸ್ಟರ್ ಡಿ'ಸೋಜ, ವಾಸುದೇವ ಕಾಮತ್, ಚಂದ್ರಶೇಖರ ಶೆಟ್ಟಿ, ಪ್ರಾಚಿ ಕಾಮತ್, ನಿಶ್ಮಿತಾ ಪುತ್ರನ್, ಶುಭಾನಂದ ರಾವ್, ಶಿವಾನಂದ ರಾವ್ ಮೊದಲಾದವರಿದ್ದರು.