ಉಡುಪಿ | ಲೋಕಬಂಧು ನ್ಯೂಸ್
ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರು ಒಂದೆಡೆ ಸೇರುವುದರಿಂದ ಒಗ್ಗಟ್ಟು ಮೂಡಲು ಸಾಧ್ಯವಿಲ್ಲ. ಸಾಮಾಜಿಕ, ಧಾರ್ಮಿಕ ಕಾರ್ಯಗಳ ಮೂಲಕ ಮಹಿಳೆಯರ ಬಲ ಏನು ಎಂಬುವುದನ್ನು ತೋರಿಸಿದರಷ್ಟೇ ಸಮಾಜದಲ್ಲಿ ಒಗ್ಗಟ್ಟು ಸಾಧಿಸಬಹುದು ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ವತಿಯಿಂದ ರಾಜಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಮನೋರಮಾ ಮಧ್ವರಾಜ್, ಶೋಭಾ ಕರಂದ್ಲಾಜೆ ಸಂಸದರಾಗಿ, ಸಚಿವರಾಗಿ ಸಂಸತ್'ನಲ್ಲಿ ಮಹಿಳಾ ಪರ ಧ್ವನಿ ಎತ್ತಿದವರಾಗಿದ್ದಾರೆ. ಪ್ರಸ್ತುತ ಜಿಲ್ಲೆಯ ಉಸ್ತುವಾರಿ ಸಚಿವರೂ ಮಹಿಳೆಯೇ ಆಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಇದೇ ರೀತಿ ಮುಂದುವರಿಯುವಂತಾಗಲಿ ಎಂದು ಆಶಿಸಿದರು.
ಪರಿವರ್ತನಾ ಫೌಂಡೇಷನ್ ಅಧ್ಯಕ್ಷ ಮೋಹನ ಭಟ್, ರಂಗ ನಟಿ ಪೂರ್ಣಿಮಾ ಸುರೇಶ್, ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಳೆ, ಕೋಶಾಧಿಕಾರಿ ರೇವತಿ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್, ಸಮಾಜ ಸೇವಕಿ ವೀಣಾ ಶೆಟ್ಟಿ ಉಪಸ್ಥಿತರಿದ್ದರು.
ಒಕ್ಕೂಟದ ತಾಲೂಕು ಅಧ್ಯಕ್ಷೆ ಪದ್ಮಾ ರತ್ನಾಕರ್ ಸ್ವಾಗತಿಸಿ, ಉಪಾಧ್ಯಕ್ಷೆ ಜ್ಯೋತಿ ರಾವ್ನಿ ನಿರೂಪಿಸಿದರು. ಕಾರ್ಯದರ್ಶಿ ಸಹಾಯಾ ಮೇರಿ ವಂದಿಸಿದರು.
