10 ರೂ.ಗೆ ಪುಸ್ತಕ ಮಾರಾಟ!

ಲೋಕಬಂಧು ನ್ಯೂಸ್ | ಉಡುಪಿ, ಏ.5
ಸಗಟು ಖರೀದಿ ಯೋಜನೆಯಯಡಿ ಪುಸ್ತಕ ಖರೀದಿಗೆ ಆಯ್ಕೆಯಾಗಿದ್ದರೂ ಖರೀದಿಸದಿರುವ ಗ್ರಂಥಾಲಯ ಇಲಾಖೆಯ ವೈಖರಿಯನ್ನು ಖಂಡಿಸಿ ಹಿರಿಯ ಸಾಹಿತಿ, ಪತ್ರಕರ್ತ ತಿಲಕನಾಥ ಮಂಜೇಶ್ವರ ಅವರು ಮಣಿಪಾಲ ಬಸ್ ನಿಲ್ದಾಣದ ಬಳಿಯ ಸಂತೆಯಲ್ಲಿ ಕುಳಿತು 110 ರೂ. ಮುಖಬೆಲೆಯ ತಮ್ಮ ಪುಸ್ತಕವನ್ನು ಕೇವಲ 10 ರೂ.ಗೆ ಮಾರಾಟ ಮಾಡಲು ತೊಡಗಿದ ಘಟನೆ ಶನಿವಾರ ನಡೆದಿದೆ.
ಅವರು ಪ್ರತಿಭಟನೆ ಹಾಗೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಸಾಹಿತ್ಯ ಪ್ರೇಮಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು.


ಅದನ್ನು ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪರಿಷತ್ತಿನ ಸದಸ್ಯರು  ಒಂದಾಗಿ ಪ್ರತಿಭಟನಾ ನಿರತ ಹಿರಿಯ ಸಾಹಿತಿ ತಿಲಕನಾಥ ಮಂಜೇಶ್ವರ ಬಳಿಗೆ ಬಂದು ನಿಮ್ಮ ಎಲ್ಲಾ ಕೃತಿಗಳ ಪ್ರತಿಗಳನ್ನು ಉಡುಪಿ ತಾಲೂಕು ಪರಿಷತ್ತಿನ ಮೂಲಕ ನಾವು ಖರೀದಿಸುತ್ತೇವೆ. ಉತ್ತಮ ಬರಹಗಾರರಾದ ತಾವು ಈ ಇಳಿವಯಸ್ಸಿನಲ್ಲಿ ಹೀಗೆ ಪ್ರತಿಭಟನೆ ಮಾಡುತ್ತಿರುವುದನ್ನು ಕಂಡಾಗ ನಮಗೆ ನೋವಾಗುತ್ತಿದೆ. ಸರಕಾರ  ಆಶ್ವಾಸನೆ ನೀಡಿ ಖರೀದಿಸಿಲ್ಲ ಎಂದು ಚಿಂತಿಸಬೇಡಿ. ಸಾಹಿತ್ಯ ಪ್ರೇಮಿಗಳಾದ ನಾವು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಿಮ್ಮ ಪುಸ್ತಕಗಳನ್ನೆಲ್ಲ ಅದರ ಮುಖಬೆಲೆ ನೀಡಿಯೇ ಖರೀದಿಸುತ್ತೇವೆ' ಎಂದು ವಿನಂತಿಸಿದರು.


ಆಗ 'ಅಯ್ಯೋ! ಬೇಡ ಬೇಡ. ದುಡ್ಡಿಗಾಗಿ ಅಲ್ಲ ನಾನು ಮಾರುತ್ತಿರುವುದು, ಸರಕಾರದ ನಿರ್ಲಕ್ಷ್ಯದ ವಿರುದ್ಧ ನನ್ನ ಸೌಮ್ಯ ಪ್ರತಿಭಟನೆ. ಆದ್ದರಿಂದ ನನ್ನ ಪ್ರತಿಭಟನೆಯ ನಿಯಮ ಕೆಡದಂತೆ ನೀವು ಒಂದು ಪುಸ್ತಕಕ್ಕೆ 10 ರೂ.ನಂತೆ ಕೊಟ್ಟು ನಿಮಗೆ ಬೇಕಾದಷ್ಟು ಪ್ರತಿಗಳನ್ನು ಖರೀದಿಸಿ' ಎಂದು ತಿಲಕನಾಥ ಮಂಜೇಶ್ವರ ಹೇಳಿದರು.


ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಪತ್ತಿನ ಗೌರವ ಸಲಹೆಗಾರ ವಿಶ್ವನಾಥ ಶೆಣೈ, ತಾಲೂಕು ಪರಿಷತ್ತಿನ ಪರವಾಗಿ ಅಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲ ಕೃತಿಗಳನ್ನು ಖರೀದಿಸಿ ಪರಿಷತ್ತಿನ ಗ್ರಂಥಾಲಯ ಅಭಿಯಾನಕ್ಕೆ ನೀಡುವುದಾಗಿ ತಿಳಿಸಿ ಎಲ್ಲ ಪುಸ್ತಕಗಳನ್ನು ಖರೀದಿಸಿ ತಿಲಕನಾಥ ಮಂಜೇಶ್ವರ ಅವರ ಪ್ರತಿಭಟನೆಗೆ ಪೂರ್ಣ ವಿರಾಮ ನೀಡಿದರು.