ಲೋಕಬಂಧು ನ್ಯೂಸ್ | ಮಂಗಳೂರು, ಏ.9
ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 599 ಅಂಕ ಪಡೆದ ನಗರದ ಆಕಾಶಭವನದ ಸಿಎಫ್‌ಎಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿನ್ಸಿಲ್ಲಾ ಕಾರ್ಡೋಜಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.ಆಕೆ ಮೂಲತಃ ಮೂಡುಬಿದಿರೆ ಸಮೀಪದ ಪಾಲಡ್ಕದವರಾದ, ಕೊಡಿಯಾಲ್‌ಬೈಲ್ ನಿವಾಸಿ, ಸೌದಿ ಆರೇಬಿಯಾದ ಉದ್ಯೋಗಿ ಬೆನೆಡಿಕ್ಟ್ ಪ್ರಕಾಶ್ ಕಾರ್ಡೊಜಾ ಹಾಗೂ ಮಂಜನಬೈಲಿನವರಾದ ಜೆಸಿಂತಾ ಕಾರ್ಡೋಜಾ ದಂಪತಿ ಪುತ್ರಿ.
ಉತ್ತಮ ಅಂಕ ಪಡೆಯುವ ನಿರೀಕ್ಷೆ ಇತ್ತು. ಜೆಇಇ ಪರೀಕ್ಷೆ ಜೊತೆಗೆ ಬೋರ್ಡ್ ಪರೀಕ್ಷೆಗೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡ ಕಾರಣ ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು ಎಂದು ಪ್ರಿನ್ಸಿಲ್ಲಾ ತಿಳಿಸಿದರು.
ಜೆಇಇ ಪರೀಕ್ಷೆ ಬರೆದಿದ್ದು, ಉತ್ತಮ ಅಂಕ ಪಡೆದು ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಸೇರಿ ಶಿಕ್ಷಣ ಮುಂದುವರಿಸುವ ಆಶಯ ಇದೆ. ಕಂಪ್ಯೂಟರ್ ಸಾಯನ್ಸ್‌ನಲ್ಲಿ ಅತ್ಯುತ್ತಮ ಇಂಜಿನಿಯರ್ ಆಗಬೇಕೆಂಬುದು ನನ್ನ ಬಯಕೆ ಎಂದು ಪ್ರಿನ್ಸಿಲ್ಲಾ ಪ್ರತಿಕ್ರಿಯಿಸಿದ್ದಾರೆ.
'ಮಗಳ ಆಯ್ಕೆಗೆ ನಮ್ಮ ಬೆಂಬಲವಿದೆ. ಆಕೆ ಟಾಪ್ 10 ಆಗಿ ಹೊರಹೊಮ್ಮುವ ನಿರೀಕ್ಷೆ ನಮಗೂ ಇತ್ತು. ಸೌದಿಯಲ್ಲಿ ಉದ್ಯೋಗದಲ್ಲಿರುವ ಪ್ರಿನ್ಸಿಲ್ಲಾ ತಂದೆ ಪ್ರಕಾಶ್, ಮಗಳ ಈ ಸಾಧನೆಯ ಬಗ್ಗೆ ಕೇಳಿ ತುಂಬಾ ಖುಷಿ ಪಟ್ಟುಕೊಂಡಿದ್ದಾರೆ' ಎಂದು ಪ್ರಿನ್ಸಿಲ್ಲಾ ಅವರ ತಾಯಿ, ಗೃಹಿಣಿಯಾಗಿರುವ ಜೆಸಿಂತಾ ಪ್ರತಿಕ್ರಿಯಿಸಿದ್ದಾರೆ.