ಲೋಕಬಂಧು ನ್ಯೂಸ್ | ಮೈಸೂರು, ಏ.15
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆ, ಸಂಪುಟ ಪುನಾರಚನೆ ಹಾಗೂ ವಿವಿಧ ಆರೋಪ- ಪ್ರತ್ಯಾರೋಪಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದು, ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರ ಸಂಪೂರ್ಣ ಸ್ಥಿರವಾಗಿದೆ. ನಮ್ಮ ತಂದೆಯವರೇ ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಖುದ್ದು ಅಧಿವೇಶನದಲ್ಲೇ ಸಿಎಂ ಸ್ಪಷ್ಟಪಡಿಸಿದ್ದಾರೆ. ಅವರ ಮಾತೇ ಅಂತಿಮ ಎಂದು ಯತೀಂದ್ರ ತಿಳಿಸಿದ್ದಾರೆ.
ಶಾಸಕರು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಆಕಾಂಕ್ಷೆಯಿಂದ. ಅದಕ್ಕೂ ಸಿಎಂ ಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಸಂಪುಟ ಪುನಾರಚನೆ ಚರ್ಚೆ
ರಾಜ್ಯದಲ್ಲಿ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಲವು ಶಾಸಕರು ಸಂಪುಟ ಪುನಾರಚನೆಗೆ ಒತ್ತಾಯಿಸುತ್ತಿರುವುದನ್ನು ಅವರು ಒಪ್ಪಿಕೊಂಡ ಯತೀಂದ್ರ, ಸಂಪುಟ ಪುನಾರಚನೆ ಆಗಬಹುದು. ಆದರೆ, ಯಾವಾಗ ಎನ್ನುವುದು ಹೈಕಮಾಂಡ್ ನಿರ್ಧಾರ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆ ಸಿಎಂ ಆಗಿರುವ ವರೆಗೆ ಸಚಿವ ಸ್ಥಾನ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ 'ವಸೂಲಿ' ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, ನನ್ನ ವಿರುದ್ಧ ಒಂದು ಸಾಕ್ಷಿ ತೋರಿಸಲಿ. ಸಾಕ್ಷಿಯಿಲ್ಲದೆ ಆರೋಪ ಮಾಡುವುದು ಸುಲಭ ಎಂದು ಪ್ರತಿಕ್ರಿಸಿದರು. ಎರಡು ವರ್ಷಗಳಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.
ಕುಟುಂಬ ರಾಜಕಾರಣ ಅಲ್ಲ
ಕುಟುಂಬ ರಾಜಕಾರಣ ಆರೋಪ ಕುರಿತು ಮಾತನಾಡಿದ ಅವರು, ನಾನು ಎಂಎಲ್.ಸಿ. ಆಗಿರುವುದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆಯ ಅಭಿಮಾನಿಗಳ ರಕ್ಷಣೆ ಹಾಗೂ ಕ್ಷೇತ್ರದ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಕುಟುಂಬ ರಾಜಕಾರಣ ಎಂದರೆ ಮಕ್ಕಳನ್ನು ಪಕ್ಷದ ಅಧ್ಯಕ್ಷರನ್ನಾಗಿಸುವುದು, ಶಾಸಕರನ್ನಾಗಿಸುವುದು” ಎಂದು ಯತೀಂದ್ರ ವ್ಯಾಖ್ಯಾನಿಸಿದರು.
ಮುಡಾ ಪ್ರಕರಣ ರಾಜಕೀಯ ಪ್ರೇರಿತ
ಮುಡಾ ಹಗರಣ ಸಂಬಂಧ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಮೇಲ್ಮನವಿ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಇದು ರಾಜಕೀಯ ಪ್ರೇರಿತ. ಕೇಂದ್ರದ ಒತ್ತಡದಿಂದ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಆರೋಪಿಸಿದರು.
ಉಪಚುನಾವಣೆ ಗೆಲುವಿನ ವಿಶ್ವಾಸ
ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಕುರಿತು ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆಯಲ್ಲಿ ತಾನು ಪ್ರಚಾರ ನಡೆಸಿದ್ದಾಗಿ ತಿಳಿಸಿದರು.