ಲೋಕಬಂಧು ನ್ಯೂಸ್ | ಉಡುಪಿ, ಏ.13
ಓರ್ವ ವ್ಯಕ್ತಿಯ ಸಾಧನೆ ಇತರರಿಗೆ ಧನಾತ್ಮಕ ಪ್ರೇರಣೆಯಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸು ಸಾಧಿಸಲು ಯೋಗ್ಯನಾಗಿರುತ್ತಾನೆ. ನಿಜವಾದ ಗುರಿ ಸಾಧಿಸುವಲ್ಲಿ ಪ್ರಯತ್ನಿಸಿದರೆ ಜೀವನವೇ ಸ್ವತಃ ನಮ್ಮನ್ನು ಪುರಸ್ಕರಿಸುತ್ತದೆ ಎಂದು ಕಿರು ತೆರೆ ಮತ್ತು ಸಿನಿಮಾ ನಟ ಹಾಗೂ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿ ಕಾರ್ತಿಕ್ ಸಾಮಗ ಹೇಳಿದರು.
ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮ ಪ್ರಜ್ಞಾ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಮಹತ್ತರ ಸಾಧನೆಗಳಲ್ಲಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳಿರಬೇಕು ಎಂಬುದು ಶ್ರೀ ವಿಬುಧೇಶತೀರ್ಥ ಶ್ರೀಪಾದರ ಆಶಯವಾಗಿತ್ತು ಎಂದು ಸ್ಮರಿಸಿದರು.
ಬೆಂಗಳೂರು ಯುಎಸ್ಎಎಂಇಸಿ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್ ಮಾತನಾಡಿ, ಅದ್ಭುತವಾದ ಚಿಂತನೆ-ಸೃಜನಶೀಲತೆ-ಸಂಭ್ರಮ ಎಂಬ ತಾತ್ವಿಕತೆ ಹೊಂದಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಇಂಥ ಸ್ಪರ್ಧೆಗಳಲ್ಲಿ ಅವಕಾಶ ಒದಗಿಸಲಿದೆ ಎಂದರು.
ಪಿಐಎಂ ನಿರ್ದೇಶಕ ಡಾ. ಪಿ.ಎಸ್. ಐತಾಳ್ ಬಹುಮಾನಕ್ಕಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಬಹು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್., ಸುಮಾರು 6 ದಶಕಗಳಿಂದ ಪೂರ್ಣಪ್ರಜ್ಞ ಸಂಸ್ಥೆ ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ನೆಲೆಯಲ್ಲಿ ರೂಪಿಸಿಕೊಂಡು ಬಂದಿದ್ದರಿಂದ ಇಂದು ನಮ್ಮ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಡಾ.ಸೌಮ್ಯ ಶೆಟ್ಟಿ, ಪ್ರತಿಭಾ ಸಿ. ಆಚಾರ್ಯ, ಧನ್ಯಾಶ್ರೀ, ಡಾ.ಶಿವಕುಮಾರ ಅಳಗೋಡು, ಐಕ್ಯುಎಸಿ ಸಹ-ಸಂಯೋಜಕ ಡಾ.ಲಕ್ಷ್ಮೀಶ, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಜಿ. ಭಟ್ ಮತ್ತು ಕೆ.ಪಿ ನಿಹಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಮಂಜುನಾಥ ಕರಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂದೀಪ್ ಸತ್ಯಮೂರ್ತಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಧು ಪ್ರಾರ್ಥಿಸಿದರು, ಸುಮಲತಾ ಪಿ.ಜೆ. ವಂದಿಸಿದರು.