ಅಂಬೇಡ್ಕರ್‌ ಜೀವನವೇ ಆದರ್ಶ

ಲೋಕಬಂಧು ನ್ಯೂಸ್ | ಉಡುಪಿ, ಏ.14
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ವಿಸ್ತೃತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಭೀಮ ರಾವ್ ಅಂಬೇಡ್ಕರ್ ಅವರ ಜೀವನವೇ ನಮಗೆ ಆದರ್ಶ. ಸಂಘರ್ಷಗಳ ಮಧ್ಯೆಯೂ ಸಾಧನೆ ಮಾಡಿ ಜಗತ್ತಿಗೆ ಸಮಾನತೆಯ ದಾರಿದೀಪ ತೋರಿದ ಅವರ ಜೀವನದ ಮೌಲ್ಯಗಳನ್ನು ನಾವು ಕೂಡಾ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ, ಪ.ಪಂಗಡಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ 135ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.


ಇಂದು ದೇಶದಲ್ಲಿ ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳುತ್ತಿದ್ದರೆ ಅದಕ್ಕೆ ಬಾಬಾ ಸಾಹೇಬ್ ಅವರ ಸಂವಿಧಾನ ಕಾರಣ. ಅಂದು ಅವರು ಸಮಾನತೆಗಾಗಿ ಹೋರಾಟ ನಡೆಸಿ ಸಮ ಸಮಾಜದ ನಿರ್ಮಾಣ ಮಾಡಿದ್ದರಿಂದ ಇದು ಸಾಧ್ಯವಾಯಿತು.


ಸಮಾಜದ ಸಾಮರಸ್ಯ ಕಾಪಾಡುವುದು ನಮ್ಮ ಕರ್ತವ್ಯ. ಆ ಮೂಲಕ ನಾವು ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.


ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಅಂಬೇಡ್ಕರ್  ಒಂದು ಶಕ್ತಿ. ಅವರು ಯಾರಿಂದಲೂ ಪಡೆಯಲಾಗದ ಮಾಣಿಕ್ಯ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಜೊತೆ ಸರಿಸಮನಾಗಿ ದೇಶದ ಏಳಿಗೆಗಾಗಿ ದುಡಿದರು. ದೇಶದ ಕಾನೂನು ಸಚಿವರಾಗಿ ಅವರು ರೂಪಿಸಿದ ಕಾನೂನುಗಳು ನಮಗೆ ಇಂದಿಗೂ ಬಲ ತುಂಬುತ್ತಿದೆ. ಅವರು ರೂಪಿಸಿದ ಸಂವಿಧಾನವನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ‌. ಮಾತನಾಡಿ, ಬಾಬಾ ಸಾಹೇಬರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದವರು. ಹೆಣ್ಣು ಮಕ್ಕಳು ಇಂದು ಇಷ್ಟೆಲ್ಲಾ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟವರು. ತಮ್ಮ ಆಳವಾದ ಅಧ್ಯಯನದಿಂದ ಸಂವಿಧಾನದ ರಚನೆ ಮಾಡಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಅವರ ಮೂಲ ಮಂತ್ರವಾಗಿತ್ತು ಎಂದರು.


ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿ, ದೇಶದ ಧರ್ಮಗ್ರಂಥ ಎಂದು ಕರೆಯಬಹುದಾದ ಸಂವಿಧಾನವನ್ನು ತಮ್ಮ ತಪ ಮತ್ತು ತ್ಯಾಗದಿಂದ ನಿರ್ಮಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್ ದೇಶದ ನಾಗರಿಕರು ಮಾತ್ರವಲ್ಲ ಗಿಡ ಮರ ಪ್ರಾಣಿ ಪಕ್ಷಿಗಳಿಗೂ ಸಂವಿಧಾನಬದ್ಧ ಹಕ್ಕುಗಳನ್ನು ನೀಡಿದ್ದಾರೆ. ಎಲ್ಲರಿಗೂ ಸಮಾನ ಶಿಕ್ಷಣ, ಸಮಾನ ಉದ್ಯೋಗಾವಕಾಶ, ಸ್ತ್ರೀಯರಿಗೆ ಸ್ವಾತಂತ್ರ ದೊರಕಿಸಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಎಂದರು.


ಸಭಾ ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬುದ್ಧ ವಂದನೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಚರ್ಮ ಕುಶಲಕರ್ಮಿ ಪಾಂಚಾಲಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಇದ್ದರು.


ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಕಾಪು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ ವಂದಿಸಿದರು.