ಸುಸಜ್ಜಿತ ಶ್ಯಾಮಿಲಿ ಸ್ಪ್ರಿಂಗ್ಸ್ ಉದ್ಘಾಟನೆ

ಲೋಕಬಂಧು ನ್ಯೂಸ್ | ಉಡುಪಿ, ಏ.7
ಹಿರಿಯಡಕದಲ್ಲಿ ಪ್ರಕೃತಿ ರಮಣೀಯ ಪರಿಸರದ ರಾಷ್ಟ್ರೀಯ ಹೆದ್ದಾರಿ ಸನಿಹದ ಸುಮಾರು 5 ಎಕರೆ ವಿಶಾಲ ಪ್ರದೇಶದಲ್ಲಿ ತಲೆಯೆತ್ತಿರುವ ಒಂದೇ ಸೂರಿನಡಿಯಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾನಿಯಂತ್ರಿತ ಉಡುಪಿ ಕೋಸ್ಟಲ್ ವುಡ್ ರೆಸಾರ್ಟ್ಸ್ ಸಹಸಂಸ್ಥೆ ಶ್ಯಾಮಿಲಿ ಸ್ಪ್ರಿಂಗ್ಸ್ ಮಂಗಳವಾರ ಲೋಕಾರ್ಪಣೆಗೊಂಡಿತು.
ಶ್ಯಾಮಿಲಿ ಸ್ಪ್ರಿಂಗ್ಸ್ ಆಡಳಿತ ನಿರ್ದೇಶಕ ಹಾಗೂ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಅವರು ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಶಾಲಿನಿ ಜಿ. ಶಂಕರ್, ಶ್ಯಾಮಿಲಿ ನವೀನ್, ನವೀನ್, ಎಸ್.ಕೆ. ಆನಂದ್, ಶಿವ ಎಸ್. ಕರ್ಕೇರ, ಜಗದೀಶ ಕಾಂಚನ್, ಗುರುಪ್ರಸಾದ್, ನಿತಿನ್, ವಿಕಾಸ್, ಶನಾಯ ಮತ್ತು ಶಾನ್ವಿಕ, ಶಾಸಕ ಯಶಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕೋಟ ಹಲವು ಮಕ್ಕಳ ತಾಯಿ ದೇವಳ ಆಡಳಿತ ಸಮಿತಿ ಸದಸ್ಯ ಆನಂದ ಸಿ. ಕುಂದರ್, ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ ಮೊದಲಾದವರಿದ್ದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ಸ್, ಶಾನ್ವಿಕ ಕನ್ವೆನ್ಷನ್ ಸೆಂಟರ್, ಶನಾಯ ಗ್ರ್ಯಾಂಡ್, ಡೈನಿಂಗ್ ಹಾಲ್, ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್, ಸ್ಪ್ರಿಂಗ್ಸ್ ಪ್ರೀಮಿಯಂ ರೂಮ್'ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಂಜೇಶ್ವರ ನಾಟ್ಯ ನಿಲಯಂ ತಂಡದ ಡಾ.ಸಾತ್ವಿಕಾ ಕೃಷ್ಣ ಮಂಜೇಶ್ವರ ಬಳಗದವರಿಂದ ಸಾಂಸ್ಕೃತಿಕ ಕಲಾವೈಭವ ನಡೆಯಿತು.


ಶ್ಯಾಮಿಲಿ ಸ್ಪ್ರಿಂಗ್ಸ್ ವೈಶಿಷ್ಟ್ಯತೆ
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕನ್ವೆನ್ಷನ್ ಸೆಂಟರ್'ನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ಡಾ.ಜಿ. ಶಂಕರ್ ಅವರ ಕನಸಿನ ಯೋಜನೆ ಶ್ಯಾಮಿಲಿ ಸ್ಪ್ರಿಂಗ್ಸ್'ನ್ನು ನಿರ್ಮಾಣ ಮಾಡಲಾಗಿದೆ. ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೊರೇಟ್ ವಲಯದ ಮೀಟಿಂಗ್, ಪಾರ್ಟಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.
ವಿಶಾಲ ಭೂ ಪ್ರದೇಶದಲ್ಲಿ ಉತ್ತಮ ಪಾರ್ಕಿಂಗ್, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣಗಳನ್ನು ಒಳಗೊಂಡಿರುವ ಶ್ಯಾಮಿಲಿ ಸ್ಪ್ರಿಂಗ್ಸ್ ರಾಯಲ್ ಲುಕ್ ಕೊಟ್ಟಿದ್ದು, ಆಕರ್ಷಣೀಯ ಸ್ಥಳವಾಗಿದೆ.
ಸಂಪೂರ್ಣ ಹವಾನಿಯಂತ್ರಿತ 1,000 ಮಂದಿ ಆಸೀನರಾಗಲು ಬೇಕಾದ ವ್ಯವಸ್ಥೆಯುಳ್ಳ ಶಾನ್ವಿಕ ಕನ್ವೆನ್ಷನ್ ಸೆಂಟರ್, ಊಟಕ್ಕೆ ಪ್ರತ್ಯೇಕವಾಗಿರುವ ಶನಾಯ ಗ್ರ್ಯಾಂಡ್ ಹಾಲ್'ಗಳಿವೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿಗೆ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯವಿದೆ.


ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರ ಇದೆ.


30 ಎಸಿ ಡಿಲೆಕ್ಸ್ ರೂಮ್
ಶ್ಯಾಮಿಲಿ ಸ್ಪ್ರಿಂಗ್ಸ್  ಕೇವಲ ಸಭಾಂಗಣಕ್ಕಷ್ಟೇ ಸೀಮಿತವಾಗದೇ 30 ಎಸಿ ಡಿಲೆಕ್ಸ್ ರೂಮ್, 2 ಪ್ರತ್ಯೇಕ ವಿಲ್ಲಾಗಳನ್ನು ಒಳಗೊಂಡಿದೆ. ದೂರದ ಊರಿನಿಂದ ಆಗಮಿಸಿ ಉಳಿದುಕೊಂಡು ಮದುವೆ, ಸಮಾರಂಭಗಳನ್ನು ಮುಗಿಸಿ ತೆರಳುವುದಕ್ಕೂ ಇಲ್ಲಿ ವ್ಯವಸ್ಥೆ ಇದೆ.
300ಕ್ಕೂ ಅಧಿಕ ಕಾರುಗಳು ಪಾರ್ಕ್ ಮಾಡಲು ಬೇಕಾದ ವಿಶಾಲ ಪಾರ್ಕಿಂಗ್ ಏರಿಯಾ, ಸ್ವಿಮ್ಮಿಂಗ್ ಫೂಲ್, ರಿಕ್ರಿಯೇಶನ್ ಕ್ಲಬ್, ಜಿಮ್ ಇದೆ.
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕನ್ವೆನ್ಷನ್ ಸೆಂಟರ್ ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಲಭಿಸಬೇಕೆನ್ನುವ ನಿಟ್ಟಿನಲ್ಲಿ ಶ್ಯಾಮಿಲಿ ಸ್ಪ್ರಿಂಗ್ಸ್ ನಿರ್ಮಿಸಲಾಗಿದೆ.


ಲಾಭ ಗಳಿಕೆ ಜನಸೇವೆಗೆ
ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೂ ಗುಣಮಟ್ಟದ ಸೌಲಭ್ಯ ಕಲ್ಪಿಸುವ ಆಶಯದಿಂದ ಶ್ಯಾಮಿಲಿ ಸ್ಪ್ರಿಂಗ್ಸ್ ಆರಂಭಿಸಲಾಗಿದ್ದು, ಕೇವಲ ಲಾಭ ಗಳಿಕೆ ನಮ್ಮ ಉದ್ದೇಶ ಅಲ್ಲ. ಗಳಿಸಿದ ಲಾಭವನ್ನು ಸ್ಥಳೀಯರಿಗೆ ಆರೋಗ್ಯ, ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ಡಾ.ಜಿ.ಶಂಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈಗಾಗಲೇ ಕೆಲವು ವಿವಾಹಗಳು ಬುಕ್ ಆಗಿದ್ದು, ಮೊದಲ 25 ಜೋಡಿ ಮದುವೆಗೆ ಸಂಸ್ಥೆ ವತಿಯಿಂದ ಉಡುಗೊರೆ ನೀಡಲಾಗುವುದು. ಈ ಸಂಸ್ಥೆಯನ್ನು ಯಕ್ಷಗಾನ, ನಾಟಕ ಇತ್ಯಾದಿ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಿಯಾಯತಿ ದರದಲ್ಲಿ ನೀಡಲಾಗುವುದು. ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಲಾಗುತ್ತಿದೆ ಎಂದರು.