ಪ್ರಜಾಪ್ರಭುತ್ವದ ನೆಲೆ ಗಟ್ಟಿಗೊಳಿಸುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು

ಲೋಕಬಂಧು ನ್ಯೂಸ್ | ಉಡುಪಿ, ಏ.14
ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಲಿಂಗ ಜಾತಿ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಖಾತ್ರಿಪಡಿಸಿದರು. ಸಂವಿಧಾನದ ರಚನೆಯೊಂದಿಗೆ ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆಯನ್ನು ಗಟ್ಟಿಗೊಳಿಸುವಲ್ಲಿ ಡಾ. ಅಂಬೇಡ್ಕರ್ ಪಾತ್ರ ಮಹತ್ತರವಾದುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ  ಮಂಗಳವಾರ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.


ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ, ಜವಾಹರಲಾಲ್ ನೆಹರೂ ಅವರ ಮೊದಲ ಸಂಪುಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕಾನೂನು ಮತ್ತು ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜನರ ಜೀವನ ಮಟ್ಟ ಸುಧಾರಿಸಲು ಶಿಕ್ಷಣ ಪ್ರಮುಖವಾದ ಅಸ್ತ್ರ ಎಂಬ ನಿಲುವಿನೊಂದಿಗೆ ಅಂಬೇಡ್ಕರ್ ಶಿಕ್ಷಣದ ಮೂಲಕ ಜನರ ಸಶಕ್ತೀಕರಣಕ್ಕೆ  ಒತ್ತುನೀಡಿದರು.


ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಬಲವಾಗಿ ಪ್ರತಿಪಾದಿಸಿದ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಒಂದು ಚಿಂತನೆ ಮಾತ್ರವಲ್ಲದೇ ಚಳವಳಿಯೂ ಹೌದು. ಅವರ ಆಲೋಚನೆಗಳು ಹಾಗೂ ತತ್ವಗಳು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಕಾಲದಲ್ಲೂ ಪ್ರಸ್ತುತ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿಯ ಪಿಡುಗನ್ನು ತಮ್ಮ ಚಿಂತನೆಗಳು ಬರಹಗಳು ಹಾಗೂ ಹೋರಾಟದ ಮೂಲಕ ಶುದ್ಧೀಕರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಮಹಾ ಮನವತಾವಾದಿ ನಾಯಕರಾಗಿದ್ದರು ಎಂದು ಸೊರಕೆ ಅಭಿಪ್ರಾಯ ವ್ಯಕ್ತಪಡಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಸಾಹಿತಿ ಡಾ.ಗಣನಾಥ ಎಕ್ಕಾರು, ಸಮಾಜವಾದ ಪ್ರಜಾಪ್ರಭುತ್ವದ ಮುಖ್ಯ ತತ್ವ ಅಂಬೇಡ್ಕರ್ ಅವರನ್ನು ದಲಿತ ಎಂದು ಪರಿಗಣಿಸದೆ ಅವರ ಜನ್ಮ ದಿನಾಚರಣೆಯನ್ನು ಸಾರ್ವತ್ರಿಕವಾಗಿ ಆಚರಿಸಬೇಕು. ಸಮಾಜದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅದರ ಹಕ್ಕಿಗಾಗಿ ಹೋರಾಟ ನಡೆಸಿದ ಅಂಬೇಡ್ಕರ್ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಲೈಬ್ರರಿಯನ್ನು ತಮ್ಮ ಮನೆಯಲ್ಲಿಯೇ ಹೊಂದಿದ್ದರು ಎಂದರು.


ಕಾರ್ಯಕ್ರಮದಲ್ಲಿ ಮುಖಂಡರಾದ ವೆರೋನಿಕಾ ಕರ್ನೇಲಿಯೊ, ಪ್ರಖ್ಯಾತ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಫಾ|ಮಿಲಿಯಂ ಮಾರ್ಟಿಸ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಮಹಾಬಲ ಕುಂದರ್, ಹರಿಪ್ರಸಾದ್ ರೈ, ಉದ್ಯಾವರ ನಾಗೇಶ್ ಕುಮಾರ್, ಶಶಿಧರ ಶೆಟ್ಟಿ ಎಲ್ಲೂರು, ಕಿರಣ್ ಹೆಗ್ಡೆ, ಶರ್ಫುದ್ದೀನ್ ಶೇಖ್, ಯತೀಶ್ ಕರ್ಕೇರ, ಸಂಧ್ಯಾ ತಿಲಕ್, ಸತೀಶ್ ಮಂಚಿ, ಸತೀಶ್ ಕೊಡವೂರು, ಶೇಖ್  ವಹಿದ್, ಲಕ್ಷ್ಮೀಶ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುಕನ್ಯ ಪೂಜಾರಿ, ತಾರಾ ಬನ್ನಂಜೆ, ನಾಗಪ್ಪ ಕೊಠಾರಿ, ಪದ್ಮನಾಭ ಬಂಗೇರ ಇದ್ದರು.


ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ನಿರೂಪಿಸಿ, ಜಿಲ್ಲಾ ಎಸ್.ಟಿ. ಘಟಕ ಅಧ್ಯಕ್ಷ ಜಯಕುಮಾರ್ ವಂದಿಸಿದರು.