ಲೋಕಬಂಧು ನ್ಯೂಸ್ ಉಡುಪಿ, ಏ.5
ಏಸುವಿನ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತಾ ಉಪವಾಸ ಮತ್ತು ವ್ರತಾಚರಣೆಯಲ್ಲಿ ತೊಡಗಿದ್ದ ಕ್ರೈಸ್ತ ಬಾಂಧವರು ಏಸುಕ್ರಿಸ್ತನ ಪುನರುತ್ಥಾನದ ಈಸ್ಟರ್ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಭಾನುವಾರದ ಈಸ್ಟರ್ ಹಬ್ಬದ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನೆರವೇರಿತು.
ಮನೆಗಳಲ್ಲೂ ನೆಂಟರಿಷ್ಟರು ಮತ್ತು ಅತಿಥಿಗಳನ್ನು ಸ್ವಾಗತಿಸಿ ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಸಂತೋಷ ಹಂಚಿಕೊಂಡರು.
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶನಿವಾರ ರಾತ್ರಿ ನಡೆದ ಪಾಸ್ಕ ಜಾಗರಣೆಯಲ್ಲಿ ಭಾಗವಹಿಸಿದ್ದು ಭಾನುವಾರ ತಮ್ಮ ನಿವಾಸದಲ್ಲಿನ ಚಾಪೆಲ್'ನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಪ್ರವಚನ ನೀಡಿದ ಅವರು ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರ ಮರಣ ಹೊಂದಿದ ಏಸುಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದುಬಂದು ತನ್ನ ದೈವತ್ವವನ್ನು ತೋರ್ಪಡಿಸಿದ ಸಂಭ್ರಮದ ಆಚರಣೆಯೇ ಈಸ್ಟರ್.
ಏಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ ದರ್ಪದಡಿ ಎಲ್ಲಾ ಭರವಸೆ ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯ ನೀಡಿತ್ತು. ಅಲ್ಲದೆ, ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಪೂರ್ತಿ ತುಂಬಿತ್ತು .
ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ ಹೊಸ ಜೀವನ, ಹೊಸ ಸಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದರು.
ಭಾನುವಾರ ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಖುಷಿಯಿಂದ ಚರ್ಚಿನ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿ ಬಳಿಕ ಧರ್ಮಗುರುಗಳಿಂದ ಆಶೀರ್ವಾದ ಪಡೆದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮನೆಗೆ ತೆರಳಿ ಕುಟುಂಬಿಕರು, ಸ್ನೇಹಿತರೊಂದಿಗೆ ಸೇರಿ ಹಬ್ಬ ಆಚರಿಸಿದರು.