ಅಂಬೇಡ್ಕರ್ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ, ಕಾಂಗ್ರೆಸ್ ಪಕ್ಷ

ಲೋಕಬಂಧು ನ್ಯೂಸ್ | ಬೆಂಗಳೂರು, ಏ.14
ದೇಶಕ್ಕೆ ಸ್ವಾತಂತ್ರ್ಯ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತದ ಕೊಡುಗೆಯಲ್ಲಿ ಡಾ.ಅಂಬೇಡ್ಕರ್ ಪಾತ್ರ ಗಮನೀಯ ಎಂದು ಮುಖ್ಯಮಂತ್ರಿ ಎಸ್.ಸಿದ್ಧರಾಮಯ್ಯ ಹೇಳಿದರು.ಕೆಪಿಸಿಸಿ ವತಿಯಿಂದ‌ ಮಂಗಳವಾರ ಆಯೋಜಿಸಲಾದ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.


ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು ಮುಖ್ಯಮಂತ್ರಿಯಾಗಿ ಜನ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರವಲ್ಲದೆ ಇಡೀ ಜಗತ್ತಿನ ನಾಯಕರಾಗಿದ್ದರು. ಭಾರತಕ್ಕೆ ಅತ್ಯಂತ  ಯೋಗ್ಯವಾದ ಸಂವಿಧಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಲಭಿಸಿದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಫಲಿಸುತ್ತದೆ ಎಂದಿದ್ದರು.


ಒಬ್ಬ ವ್ಯಕ್ತಿ , ಒಂದು ವೋಟು, ಒಂದು ಮೌಲ್ಯ ಎಂದು ಸಂವಿಧಾನ ತಿಳಿಸಿದ್ದು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ. ಸಂವಿಧಾನ ಜಾರಿಯಾಗಿ 76 ವರ್ಷಗಳು ಕಳೆದರೂ ಸಮಾಜದಲ್ಲಿನ ಅಸಮಾನತೆ ಹೋಗಿಲ್ಲ ಎಂದು ವಿಷಾದಿಸಿದರು.


ಬಿಜೆಪಿ-ಆರ್.ಎಸ್.ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಅಂದು ಆರ್.ಎಸ್.ಎಸ್ ಮುಖವಾಣಿಯಾಗಿದ್ದ 'ಆರ್ಗನೈಸರ್' ಪತ್ರಿಕೆಯಲ್ಲಿ ಸಂವಿಧಾನವನ್ನು ವಿರೋಧಿಸಿದ್ದರು. ಆದರೆ, ಈಗ ಆರ್.ಎಸ್.ಎಸ್ –ಬಿಜೆಪಿಯವರು ಅಂಬೇಡ್ಕರ್ ಅವರನ್ನು ಹೊಗಳುತ್ತಿದ್ದಾರೆ. ಅಂಬೇಡ್ಕರ್ ಸೋಲಿಗೆ ಕಮ್ಯುನಿಸ್ಟ್ ಪಕ್ಷದ ಎಸ್.ಎ.ಡಾಂಗೆ ಮತ್ತು ಹಿಂದುತ್ವ ನಾಯಕ ವಿ.ಡಿ.ಸಾರ್ವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಬರೆದುಕೊಂಡಿದ್ದಾರೆ. ಆದರೆ, ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.


ದೀನ ದಲಿತರಿಗೆ ಸಮಾನ ಅವಕಾಶ ಕಲ್ಪಿಸಲು ಅಂಬೇಡ್ಕರ್ ಪ್ರಯತ್ನಿಸಿದರು. ಎಲ್ಲ ಶೋಷಿತ ವರ್ಗದವರಿಗೂ ಸಮಾನ ಶಿಕ್ಷಣದ ಹಕ್ಕನ್ನು ಸಂವಿಧಾನ ನೀಡಿತು. ಶಿಕ್ಷಣದಲ್ಲಿ ಮಾನವೀಯತೆ, ವೈಚಾರಿಕತೆ, ವೈಜ್ಞಾನಿಕತೆಯ ಮಹತ್ವವನ್ನು ತಿಳಿಸಿದ್ದ ಅಂಬೇಡ್ಕರ್ ಸಿದ್ದಾಂತಗಳಂತೆ ನಡೆದು, ಅವರ ಕನಸಿನ ಭಾರತ ಕಟ್ಟಲು ಎಲ್ಲರೂ ಶ್ರಮಿಸಬೇಕು ಎಂದರು.